Monday, December 8, 2025
Google search engine

HomeUncategorizedರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ – ಡಿಸೆಂಬರ್ ತಿಂಗಳ ಶ್ರಮದಾನ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ – ಡಿಸೆಂಬರ್ ತಿಂಗಳ ಶ್ರಮದಾನ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಡಿಸೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಂಗಳೂರಿನ ಹಂಪನಕಟ್ಟೆ ಮಿನಿ ವಿಧಾನಸೌಧ ಆವರಣದಲ್ಲಿ ನೆರವೇರಿತು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮತ್ತು ನಿಟ್ಟೆ (ಪರಿಗಣಿತ) ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಧನೇಷ್ ಕುಮಾರ್, ಬಿ. ಗೋಪಿನಾಥ್ ರಾವ್ ಮತ್ತು ಹಲವು ಹಿರಿಯ ಸ್ವಯಂಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ, “ಮಂಗಳೂರು ನಗರಕ್ಕೆ ಬರುವ ಪ್ರವಾಸಿಗರು ಮತ್ತು ಸಂದರ್ಶಕರು ಮಂಗಳೂರಿನ ಸ್ವಚ್ಛತೆಯನ್ನು ಮೆಚ್ಚುತ್ತಾರೆ. ಈ ಸ್ವಚ್ಛತೆಯ ಹಿಂದೆ ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಸಂಘಟಿತ ಪರಿಶ್ರಮವಿದೆ. ನಗರಾಭಿವೃದ್ಧಿಗೆ ದೂರದೃಷ್ಠಿರತ್ವದ ಯೋಜನೆಗಳ ಅನುಷ್ಠಾನ ಮತ್ತು ಜನರ ಭಾಗವಹಿಸುವಿಕೆ ಎರಡೂ ಮುಖ್ಯ. ಈ ಕ್ಷೇತ್ರದಲ್ಲಿ ರಾಮಕೃಷ್ಣ ಮಿಷನ್ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ” ಎಂದು ಅಭಿಪ್ರಾಯಪಟ್ಟರು.
ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರೊ. ಪುರುಷೋತ್ತಮ ಚಿಪ್ಪಳ ಹಾಗೂ ಡಾ. ರಾಕೇಶ್, ಡಾ. ಜಯೇಶ್, ಡಾ. ನಿತ್ಯಲ್ ಮತ್ತು ಡಾ. ರುಚಿತಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಸ್ವಯಂಸೇವಕರ ದೊಡ್ಡ ತಂಡವು ಮಿನಿ ವಿಧಾನಸೌಧ ಆವರಣದಲ್ಲಿನ ಉಪವನದ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ತೆರವು ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು.
ಹಿರಿಯ ಸ್ವಯಂಸೇವಕರಾದ ಉದಯ ಕೆ.ಪಿ., ಶಿವರಾಮ್, ಸುನಂದಾ, ವಸಂತಿ ನಾಯಕ್, ಅವಿನಾಶ್, ಪುಂಡಲೀಕ ಶೆಣೈ, ವಿಠ್ಠಲ ಪ್ರಭು, ರಾಜೀವಿ, ಪ್ರಕಾಶ್, ಗಂಗಾಧರ ಶಾಸ್ತ್ರಿ ಹಾಗೂ ಮತ್ತೊಂದು ವಿದ್ಯಾರ್ಥಿಗಳ ತಂಡ ಸೇರಿಕೊಂಡು ಆವರಣದಲ್ಲಿ ಗುರುತಿಸಲಾದ ಆರು ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಜಮೆಯಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಆವರಣದ ಸ್ವಚ್ಛತೆಗೆ ಹೊಸ ಮೆರುಗು ನೀಡಿದರು.
ದಿಲ್ ರಾಜ್ ಆಳ್ವ ನೇತೃತ್ವದಲ್ಲಿ ಬಾಲಕೃಷ್ಣ ಭಟ್, ಪ್ರಕಾಶ್ ಗರೋಡಿ, ಸಚಿನ್ ಶೆಟ್ಟಿ, ರಾಘವೇಂದ್ರ ಕಲ್ಲೂರ್, ಭವಿತ್ ಸಾಲಿಯನ್ ಮತ್ತು ವರುಣ್; ಮಿನಿ ವಿಧಾನಸೌಧ ಪ್ರವೇಶ ದ್ವಾರದ ಬಳಿಯ ಉಪವನದಲ್ಲಿದ್ಧ ಪ್ಲಾಸ್ಟಿಕ್ ತ್ಯಾಜ್ಯ, ಗಾಜಿನ ಬಾಟಲಿಗಳು, ಅನುಪಯುಕ್ತ ಗಿಡಗಂಟೆಗಳು, ಬಳಕೆಯಾಗದ ಕಲ್ಲುಗಳು ಮುಂತಾದವುಗಳನ್ನು ತೆರವುಗೊಳಿಸಿದರು. ಕಚೇರಿಗೆ ಭೇಟಿ ನೀಡುವವರಿಗೆ ಅಡಚಣೆ ಉಂಟುಮಾಡುತ್ತಿದ್ದ ಮರದ ಕೊಂಬೆಗಳನ್ನು ಕತ್ತರಿಸುವ ಮೂಲಕ ಸುಗಮ ಸಂಚಾರ ಮತ್ತು ಆವರಣದ ಸೌಂದರ್ಯವನ್ನು ಹೆಚ್ಚಿಸಿದರು.
ಈ ಅಭಿಯಾನದ ಮೂಲಕ ಮಂಗಳೂರಿನ ನಾಗರಿಕರು ಪ್ರತಿ ತಿಂಗಳು ನಡೆಯುವ ಈ ಶ್ರಮದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸ್ವಚ್ಛ ಮತ್ತು ಸುಂದರ ನಗರ ನಿರ್ಮಿಸಲು ಕೈಜೋಡಿಸಬೇಕೆಂದು ಸ್ವಚ್ಛ ಮಂಗಳೂರು ಪ್ರತಿಷ್ಠಾನ ಮತ್ತು ಮಠದ ತಂಡ ವಿನಂತಿಸಿದೆ.

ಪ್ರೇರಣಾದಾಯಕ ತಾಯಿ ಮತ್ತು ಮಗ – ಹೆಮ್ಮೆಯ ಸ್ವಯಂಸೇವಕರು
ಈ ತಿಂಗಳ ಶ್ರಮದಾನದಲ್ಲಿ ವಿಶೇಷವಾಗಿ ಗಮನ ಸೆಳೆದವರು ಕೆನೆರಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಬಬಿತಾ ಶೆಟ್ಟಿ ಮತ್ತು ಅವರ ಕಿರಿಯ ಪುತ್ರ ನೈತಿಕ್. ತಾಯಿ-ಮಗ ಸೇರಿ ಮಾಡಿದ ಈ ಶ್ರಮದಾನ ಅನೇಕ ಪೋಷಕರಿಗೆ ಪ್ರೇರಣೆಯಾಗಿದ್ದು, ಮಕ್ಕಳಲ್ಲಿ ಮೌಲ್ಯಗಳು, ನಾಗರಿಕ ಹೊಣೆಗಾರಿಕೆ ಮತ್ತು ಸಮಾಜಸೇವೆಯ ಮನೋಭಾವ ಬೆಳೆಸುವ ಅತ್ಯುತ್ತಮ ಮಾದರಿಯಾಗಿದೆ.

RELATED ARTICLES
- Advertisment -
Google search engine

Most Popular