ಬೆಳಗಾವಿ: ಬೆಂಗಳೂರಿನಲ್ಲಿ ಭಾರಿ ಸದ್ದು ಮಾಡಿದ್ದ ನಾಟಿ ಕೋಳಿ, ಇದೀಗ ಬೆಳಗಾವಿ ಅಧಿವೇಶನದಲ್ಲೂ ಇದೀಗ ಸದ್ದು ಮಾಡುತ್ತಿದೆ. ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಸಾರು ಸವಿದಿದ್ದರು. ಈ ಕುರಿತ ಸುದ್ದಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು ಇದೀಗ ಮತ್ತದೇ ನಾಟಿ ಕೋಳಿ ವಿಚಾರ ಬೆಳಗಾವಿಯಲ್ಲೂ ಭಾರೀ ಸದ್ದು ಮಾಡುತ್ತಿದೆ.
ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವುದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಶೋಕ ಅವರ ಹೆಗಲಿಗೆ ಕೈ ಇಟ್ಟು ಸಿದ್ದರಾಮಯ್ಯ ಅವರು ಆಪ್ತವಾಗಿ ಮಾತನಾಡಿದ್ದು ಎಲ್ಲರ ಗಮನ ಸೆಳೆದಿದೆ. ಸಿಎಂ ಬರುವ ಮುಂಚೆಯೇ ಸ್ಪೀಕರ್ ಖಾದರ್ ಅವರನ್ನು ಅಶೋಕ್, ಸುನೀಲ್ ಕುಮಾರ್ ಭೇಟಿಯಾಗಿದ್ದರು ಈ ವೇಳೆ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದರು. ಬಳಿಕ ಸಿಎಂ, ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಕಿಚಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಶೋಕ್ ಅವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಏನ್ ಸಣ್ಣ ಆಗಿದ್ದೀಯಾ ಅಶೋಕ್’ ಎಂದು ಕೇಳಿದ್ದು, ಇದಕ್ಕೆ ಉತ್ತರಿಸಿದ ಅಶೋಕ್, ‘ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲ ಸರ್. ನಾನು ಎಲ್ಲವನ್ನು ಬಿಟ್ಟಿದ್ದೀನಿ ಎಂದಿದ್ದಾರೆ. ಈ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಹೇ.. ತಿನ್ನು ಏನೂ ಆಗಲ್ಲ. ಬಾ ತಿನ್ನೋಣ ಎಂದಿದ್ದು, ಅಶೋಕ್ ನಕ್ಕು ಮುಂದೆ ಸಾಗಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಳಿಗಾಲದ ಅಧಿವೇಶನದ ಪ್ರಯುಕ್ತ ಸುವರ್ಣಸೌದಲ್ಲಿ ಸ್ಪೀಕರ್ ಯು.ಟಿ.ಖಾದರ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಸಚಿವರಾದ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ಕಾನೂನು ಸಲಹೆಗಾರ ಪೊನ್ನಣ್ಣ ಉಪಸ್ಥಿತರಿದ್ದರು.



