ಮೈಸೂರು : ಹಣದಾಸೆಗೆ ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿದ್ದ ನಾಲ್ವರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತೋಷ್, ಅಭಿಷೇಕ್, ಪ್ರಜ್ವಲ್, ದರ್ಶನ್ ಬಂಧಿತರು. ಎರಡು ದಿನದ ಹಿಂದೆ ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ ಲೋಕೇಶ್ರನ್ನು ಅಪಹರಣ ಮಾಡಿ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ವಿಜಯನಗರ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಅಪಹರಣವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ರಕ್ಷಿಸಿದ್ದಾರೆ. ಜೊತೆಗೆ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ.
ಲೋಕೇಶ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಹಣಕಾಸು ವಹಿವಾಟು ಜೋರಾಗಿತ್ತು. ಲೋಕೇಶ್ ವ್ಯವಹಾರವನ್ನು ಹತ್ತಿರದಿಂದ ಗಮನಿಸಿದ್ದ ಸಂತೋಷ್ ಎಂಬಾತ ಮೊದಲು ಅವರನ್ನು ಪರಿಚಯ ಮಾಡಿಕೊಳ್ಳುತ್ತಾನೆ. ನಂತರ ಲೋಕೇಶ್ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ, ನಂತರ ಅಪಹರಣಕ್ಕೆ ಸಂಚು ರೂಪಿಸುತ್ತಾನೆ. ಸಂತೋಷ್ ತನ್ನ ಜೊತೆಗೆ ಸ್ನೇಹಿತರಾದ ಅಭಿಷೇಕ್, ಪ್ರಜ್ವಲ್, ದರ್ಶನ್ ಹಾಗೂ ಪ್ರೀತಂ ಸೇರಿಸಿಕೊಂಡು ಲೋಕೇಶ್ ಅಪರಹರಣಕ್ಕೆ ಸ್ಕೆಚ್ ಹಾಕುತ್ತಾರೆ.
ಕಣ್ಣಿಗೆ ಕಾರದಪುಡಿ ಎರಚಿ ಕಿಡ್ನ್ಯಾಪ್
ಡಿಸೆಂಬರ್ 6ರಂದು ಶನಿವಾರ ರಾತ್ರಿ 8.15 ಗಂಟೆ ಸಮಯ. ವಿಜಯನಗರ 3ನೇ ಹಂತದ ಹೆರಿಟೇಜ್ ಕ್ಲಬ್ನಿಂದ ಮನೆಗೆ ತೆರಳಲು ಹೊರಗೆ ಬಂದ ಲೋಕೇಶ್ ಮೇಲೆ ಅಟ್ಯಾಕ್ ಮಾಡಿದ ಇವರು ಕಣ್ಣಿಗೆ ಖಾರದ ಪುಡಿ ಎರಚಿ ಬಲವಂತವಾಗಿ ಟಾಟಾ ಸುಮೋ ವಾಹನದಲ್ಲಿ ಎತ್ತಿ ಹಾಕಿಕೊಂಡು ಅಪಹರಣ ಮಾಡುತ್ತಾರೆ. ಲೋಕೇಶ್ ನನ್ನು ಒತ್ತೆಯಾಳು ಆಗಿರಿಸಿಕೊಂಡ ಆರೋಪಿಗಳು ಆರಂಭದಲ್ಲಿ ಒಂದು ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದರು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಬಗ್ಗೆ ಕಿಡ್ನ್ಯಾಪ್ ಆದ ಲೋಕೇಶ್ ಪತ್ನಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಕೆ.ಆರ್ ನಗರದ ಹಂಪಾಪುರ ಬಳಿ ವಶಕ್ಕೆ ಪಡೆದು ಲೋಕೇಶ್ರನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ಪ್ರಕರಣದ ಕಿಂಗ್ ಪಿನ್ ಸಂತೋಷ್, ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ರಸ್ತೆಯ ಪಂಪ್ ಹೊಸಳ್ಳಿ ಗ್ರಾಮದವನು. ಈತನಿಗೆ ನಾಲ್ಕು ತಿಂಗಳಿನಿಂದ ಲೋಕೇಶ್ ಪರಿಚಯವಿತ್ತು. ಅಷ್ಟೇ ಅಲ್ಲದೆ ಲೋಕೇಶ್ ಫೈನಾನ್ಸ್, ರಿಯಲ್ ಎಸ್ಟೇಟ್ನಲ್ಲಿ ಹಣ ಮಾಡಿಕೊಂಡಿರುವ ವಿಚಾರ ಗೊತ್ತಿತ್ತು. ಹಾಗಾಗಿ ತನ್ನ ಇತರೆ ಸ್ನೇಹಿತರೊಂದಿಗೆ ಸೇರಿ ಲೋಕೇಶ್ರನ್ನ ಅಪಹರಣ ಮಾಡಿದ್ದ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, 5 ತಂಡಗಳನ್ನ ರಚಿಸಿ ಕಾರ್ಯಾಚರಣೆ ನಡೆಸಿದರು. ಮೊದಲಿಗೆ ಪತ್ನಿಯ ಮೂಲಕ ಮಾಹಿತಿ ಪಡೆದುಕೊಂಡ ಪೊಲೀಸರು 30 ಲಕ್ಷ ರೂ. ಹಣ ಕೊಡುವುದಾಗಿ ಆರೋಪಿ ಪ್ರೀತಂ ಎಂಬಾತನನ್ನು ಕರೆಸಿಕೊಂಡಿದ್ದಾರೆ. ಮತ್ತೊಂದು ಕಡೆ ಕೆಆರ್ ನಗರ ಹಂಪಾಪುರ ಬಳಿ ಲೋಕೇಶ್ ಇರಿಸಿಕೊಂಡಿದ್ದನ್ನ ಟವರ್ ಲೊಕೇಷನ್ ಮೂಲಕ ಪತ್ತೆ ಹಚ್ಚಿದ್ದಾರೆ. ತಕ್ಷಣ ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಗಾರೆ ಕೆಲಸ, ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಸುಲಭವಾಗಿ ಹಣ ಮಾಡುವ ದಾರಿ ಅಂತಾ ಕಿಡ್ನ್ಯಾಪ್ ಮಾಡಿ ಜೈಲು ಸೇರಿದ್ದಾರೆ. ಒಟ್ಟಿನಲ್ಲಿ ಜೊತೆಗಿದ್ದವರೇ ಹಣದ ಆಸೆಗಾಗಿ ಈ ರೀತಿ ಮಾಡಿರುವುದು ನಿಜಕ್ಕೂ ದುರಂತವೇ ಸರಿ.



