ಮಂಗಳೂರು (ದಕ್ಷಿಣ ಕನ್ನಡ): ನಾನು ಮತ್ತು ಚಿನ್ನಯ್ಯ ಆದಿಚುಂಚನಗಿರಿ ಮಠಕ್ಕೆ ಹೋಗಿರೋದು ಸತ್ಯ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಮ್ಮ ಜೊತೆಗೆ ಸೌಜನ್ಯ ಅವ್ರ ಮನೆಯವರು ಕೂಡಾ ಇದ್ರು. ಜೊತೆಗೆ ಸೌಜನ್ಯ ಪರ ಹೋರಾಟಗಾರರಿದ್ದರು. ಆದಿಚುಂಚನಗಿರಿ ಮಠದಲ್ಲಿ ಒಂದೂವರೆ ಗಂಟೆ ಕಾಲ ಸ್ವಾಮೀಜಿಯ ಮುಂದೆಯೇ ಎಲ್ಲವನ್ನೂ ಅವನು ಬಿಡಿಸಿ ಹೇಳಿದ್ದಾನೆ ಎಂದಿದ್ದಾರೆ.
ನಾನು ಬಿಡುಗಡೆ ಮಾಡಿದ ಒಂದೂವರೆ ಗಂಟೆಯ ವಿಡಿಯೋಕ್ಕಿಂತ ಜಾಸ್ತಿಯೇ ಅಲ್ಲಿ ಮಾತನಾಡಿದ್ದಾನೆ. ಯಾರ್ಯಾರು ಅತ್ಯಾಚಾರ ಮಾಡಿದ್ದಾರೆ, ಮಾಡಿಸಿದ್ದಾರೆ ಎಲ್ಲವನ್ನೂ ಹೇಳಿದ್ದಾನೆ ಎಂದ ಅವರು, ಸ್ವಾಮೀಜಿಗಳು ಯಾಕೆ ಈ ವಿಚಾರವನ್ನು ಸಮಾಜದ ಮುಂದೆ ಹೇಳುತ್ತಿಲ್ಲ. ಸ್ವಾಮೀಜಿ ಸ್ವತಃ ಈ ವಿಚಾರವನ್ನು ಮುಖ್ಯಮಂತ್ರಿಗಳಲ್ಲಿ ಹೇಳಿ ಶಿಕ್ಷೆ ಕೊಡಿಸುತ್ತೇನೆ ಎಂದಿದ್ದರು. ಶಿಕ್ಷೆ ಕೊಡಿಸಿಯೇ ಕೊಡಿಸುತ್ತೇನೆಂದು ಮಹಾಕಾಳನ ಮೇಲೆ ಪ್ರಮಾಣ ಮಾಡಿದ್ದಾರೆ. ಈಗ ಸ್ವಾಮೀಜಿಗಳು ನ್ಯಾಯ ಕೊಡಿಸಲಿ ಎಂದು ಸವಾಲು ಹಾಕಿದ್ದಾರೆ. ಅದು ಬಿಟ್ಟು ಮಠದಲ್ಲಿ ಕುಳಿತು ರಾಜಕೀಯ ಮಾಡುವುದಲ್ಲ. ಎಲ್ಲಾ ಸ್ವಾಮೀಜಿಗಳಿಗೂ ಈ ಮಾತು ಅನ್ವಯಿಸುತ್ತದೆ. ನಾವು ನೇರವಾಗಿ ಸನಾತನ ಧರ್ಮದ ಪ್ರತಿಪಾದಕರೇ ಹೊರತು ಹಿಂದೂ ಧರ್ಮದ ವಿರೋಧಿಗಳಲ್ಲ. ಈ ವಿಚಾರವನ್ನು ಹಿಂದೆಯೂ ಹೇಳಿದ್ದೇನೆ. ಇಂದೂ ಹೇಳುತ್ತೇನೆ ಮುಂದೆಯೂ ಹೇಳುತ್ತೇನೆ SIT ತನಿಖೆ ಆರಂಭವೇ ಆಗಿಲ್ಲ ಎಂದು. ಅತ್ಯಾಚಾರಿಗಳ ವಿಚಾರಣೆ ಇನ್ನಷ್ಟೇ ಆಗಬೇಕಿದೆ. ಇಲ್ಲಿ ತನಕ ಬರೇ ಒಂದು ಬುರುಡೆ ಹಿಡಿದುಕೊಂಡು ನಾಟಕ ಮಾಡುತ್ತಿದ್ದಾರೆ ಅಷ್ಟೇ. SIT ಒಳಗಡೆಯೇ ಷಡ್ಯಂತ್ರ ಮಾಡುವವರು ತುಂಬಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಸ್ವತಹ ಎಸ್.ಪಿ ಕೂಡಾ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯವೂ ಹೊರಬರಲಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ನಮಗೆ ಯಾರ ಮೇಲೆಯೂ ನಂಬಿಕೆ ಇಲ್ಲದಂತೆ ಆಗಿದೆ. ಮಾದ್ಯಮ, ಕಾರ್ಯಾಂಗ ಯಾವುದರ ಮೇಲೆಯೂ ನಂಬಿಕೆಯಿಲ್ಲ. ದೇಶದ ಕಾನೂನಿನ ಮೇಲೆ ಮಾತ್ರ ನಮಗೆ ನಂಬಿಕೆ ಇರೋದು ಮುಂದಿನ ದಿನಗಳಲ್ಲಿ ಕಾನೂನು ಮೂಲಕವೇ ನಾವು ಹೋರಾಟವನ್ನು ಮಾಡುತ್ತೇವೆ ಎಂದು ಪಣ ತೊಟ್ಟಿದ್ದಾರೆ.



