ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಮಹಾರಾಷ್ಟ್ರದ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟಿಕೆ ಮೆರೆದಿದ್ದು, ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ.
ಇಂದು ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ನಡೆಸಲು ಮುಂದಾಗಿದ್ದರು. ಆದರೆ ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ರಸ್ತೆಗಿಳಿದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಕೊಲ್ಲಾಪುರ ಸೆಂಟ್ರಲ್ ಬಸ್ ಸ್ಟ್ಯಾಂಡ್‌ನಲ್ಲಿ ಶಿವಸೇನೆ ಕಾರ್ಯಕರ್ತರು ಉದ್ಧಟತನ ಪ್ರದರ್ಶಿಸಿದ್ದು, ಠಾಕ್ರೆ ಬಣದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಅಲ್ಲದೆ ಮಹಾರಾಷ್ಟ್ರದ ಕೆಲವು ನಾಯಕರು ಬೆಳಗಾವಿ ಜಿಲ್ಲೆ ಪ್ರವೇಶಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬೆಳಗಾವಿಯಲ್ಲಿ ಮತ್ತು ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ತಡೆಯುವಂತೆ ಪೊಲೀಸರು ಸೂಚಿಸಿದ ಕಾರಣ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಹಾರಾಷ್ಟ್ರಕ್ಕೆ KSRTC ಬಸ್ ಸಂಚಾರವನ್ನು ಬಂದ್ ಮಾಡಿದ್ದಾರೆ.
ಈ ನಡುವೆ ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಿದ್ದು, ಎಂಇಎಸ್ ಮುಖಂಡ ಮಾಳೋಜಿ ಅಷ್ಟೇಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವ್ಯಾಕ್ಸಿಡಿಪೋದ ಮೈದಾನಕ್ಕೆ ಆಗಮಿಸುತ್ತಿದ್ದಂತೆಯೇ ಮಾಜಿ ಮೇಯರ್ ಅಷ್ಟೇಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



