ಬೆಳಗಾವಿ: ವಿಧಾನಸಭೆ ಚಳಿಗಾಲದ ಅಧಿವೇಶನ ಮಧ್ಯೆ ಕೂಡ ಸಿಎಂ ಕುರ್ಚಿ ಕದನ, ಘೋಷಣೆ ನಿಂತಿಲ್ಲ. ಹೈಕಮಾಂಡ್ ಸೂಚನೆಯನ್ನೂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬಣದ ಬೆಂಬಲಿಗರು ಕ್ಯಾರೇ ಎನ್ನತ್ತಿಲ್ಲ. ಬೆಳಗಾವಿಯಲ್ಲಿ ಆರಂಭಗೊಂಡಿರುವ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ ಇಂದು ಮಂಗಳವಾರ ಬೆಳಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಇದೇ ವೇಳೆ ಅವರ ಬೆಂಬಲಿಗರು, ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಎಂದು ಒಂದೇ ಸಮನೆ ಘೋಷಣೆಗಳನ್ನು ಕೂಗಿದ್ದಾರೆ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿ ಅವಧಿ ಪೂರೈಸಲಿದ್ದಾರೆ ಎಂದು ಅವರ ಪುತ್ರ ಯತೀಂದ್ರ ಸೋಮವಾರ ಬೆಳಗಾವಿಯಲ್ಲಿ ಹೇಳಿದ್ದರು. ಅದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಪರ ಘೋಷಣೆ ಮೊಳಗಿದೆ ಎನ್ನಲಾಗಿದೆ.
ಇಂದು ಬೆಳಗಾವಿಗೆ ಹೊರಡುವ ಮುನ್ನ ಡಾ.ಯತೀಂದ್ರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್, ಬಹಳ ಸಂತೋಷ, ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಬೆಳಗಾವಿಗೆ ಆಗಮಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭವಾಗಿದೆ.
ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ರಾಜ್ಯದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿವೆ. ವಿಶೇಷವಾಗಿ ರೈತರ ಸಮಸ್ಯೆಯ ಬಗ್ಗೆ ಹಾಗೂ ಕೇಂದ್ರ ಸರ್ಕಾರ ರೈತರ ಸಮಸ್ಯೆಯಲ್ಲಿ ಏಕೆ ಭಾಗಿಯಾಗುತ್ತಿಲ್ಲ, ಕನಿಷ್ಠ ಬೆಂಬಲ ಬೆಲೆಯನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ? ನಾವು ಕಬ್ಬಿನ ಬೆಲೆಯನ್ನು ಹೆಚ್ಚಿಸಿದ್ದೇವೆ, ಆದರೆ ಕೇಂದ್ರ ಸರ್ಕಾರ ಸಕ್ಕರೆ ಬೆಲೆಯನ್ನು ಏಕೆ ಹೆಚ್ಚಿಸುತ್ತಿಲ್ಲ ಎಂದು ಕೇಳಿದ್ದಾರೆ.
ಹೆಚ್ಚುತ್ತಿರುವ ಸಕ್ಕರೆ ಬೆಲೆಯೊಂದಿಗೆ ಉಳಿದ ಮೊತ್ತವನ್ನು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕಕ್ಕೆ ನೀಡುವಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಈ ದಿಕ್ಕಿನಲ್ಲಿ ನಿರ್ಣಯ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.



