ಬೆಳಗಾವಿ : ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಅದನ್ನು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿ, ಕಬ್ಬು, ಮೆಕ್ಕೆಜೋಳ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾದಾಗ ಕೇಂದ್ರ ಸರ್ಕಾರ ರೈತರ ನೆರವಿಗೆ ಬಂದಿಲ್ಲ ಎಂದು ಆರೋಪಿಸಿದರು. ಎಥೆನಾಲ್ ಖರೀದಿ ಸಾಮರ್ಥ್ಯವನ್ನು ವಿಸ್ತರಣೆ ಮಾಡಿ ಎಂದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಯಾವ ಯೋಜನೆಗಳಿಗೂ ಸರಿಯಾದ ಅನುದಾನ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಈ ವೇಳೆ ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಬಳಿ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಲು ಕೇಂದ್ರ ಸರ್ಕಾರ ಮನಸ್ಸು ಮಾಡಿಲ್ಲ. ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲಿತ ಅಣೆಕಟ್ಟು ನಿರ್ಮಿಸಲು ನ್ಯಾಯಾಲಯದಲ್ಲಿ ನಮ ಅವಧಿಯ ಹೋರಾಟಕ್ಕೆ ಅನುಮತಿ ಸಿಕ್ಕಿದೆ. ಸಂಸದರಾದರೆ ಮೇಕೆದಾಟು ನಿರ್ಮಾಣಕ್ಕೆ ಒಂದು ದಿನದಲ್ಲಿ ಅನುಮತಿ ಕೊಡಿಸುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದರು. ಈವರೆಗೂ ಯಾವ ಅನುಮತಿಯೂ ಸಿಕ್ಕಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗಾಗಿ 5,400 ಕೋಟಿ ರೂಪಾಯಿಗಳನ್ನು ಕೊಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ನಲ್ಲಿ ಪ್ರಕಟಿಸಿದ್ದರು. ಈವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ನೆರೆ ಸಂತ್ರಸ್ಥ ರೈತರಿಗೆ 76 ಸಾವಿರ ಕೋಟಿ ರೂಪಾಯಿಗಳನ್ನು ನೀಡುವುದಾಗಿ ನಮ ಸರ್ಕಾರ ಭರವಸೆ ನೀಡಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆ ಹೊರಡಿಸಬೇಕು. ಅದಕ್ಕೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪ ಮಾಡಿದ್ದಾರೆ. ಇನ್ನೂ ಬಿಜೆಪಿಯ ರಾಜ್ಯ ಸಂಸದರು ಸಂಸತ್ತಿನಲ್ಲಾಗಲಿ, ಕೇಂದ್ರ ಸರ್ಕಾರದ ಪ್ರತಿನಿಧಿಗಳ ಮುಂದೆಯಾಗಲಿ ಒಂದು ದಿನವೂ ಬಾಯಿ ಬಿಟ್ಟಿಲ್ಲ. ಇನ್ನು ಯಾವ ಮರ್ಯಾದೆ ಇಟ್ಟುಕೊಂಡು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



