ಬೆಳಗಾವಿ: ನಾನೇ ನಿಜವಾದ ವಿರೋಧ ಪಕ್ಷದ ನಾಯಕನಾಗಿದ್ದೇನೆ. ನನಗೆ ಕೊನೆಯಲ್ಲಿ ಕುರ್ಚಿ ಏಕೆ ನೀಡಲಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ಕುರ್ಚಿ ವಿಚಾರವಾಗಿ ಸ್ವಾರಸ್ಯಕರ ಚರ್ಚೆ ನಡೆಸಲಾಗಿದ್ದು, ಪ್ರಶ್ನೋತ್ತರ ಕಲಾಪಕ್ಕೆ ಮೊದಲು ಈ ವಿಚಾರ ಪ್ರಸ್ತಾಪ ಮಾಡಿದ ಯತ್ನಾಳ್, ಸದನದಲ್ಲಿ ನಾನೇ ನಿಜವಾದ ವಿರೋಧ ಪಕ್ಷದ ನಾಯಕ. ಉಪಾಧ್ಯಕ್ಷರ ಪಕ್ಕದ ಕುರ್ಚಿಯನ್ನು ನನಗೆ ನೀಡಿ ಎಂದು ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಹಿಂದಿನ ಭಾಗದಲ್ಲಿ ಕುರ್ಚಿ ನೀಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್ ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಖಾದರ್ ನಮಗೆ ಹಿಂದಿನ ಸೀಟು ಕೊಟ್ಟಿದ್ದೀರಿ ಎಂದು ಕಳೆದ ಬಾರಿ ಗಮನಕ್ಕೆ ತರಲಾಗಿತ್ತು. ಆದರೆ ರಾಜಕೀಯದಲ್ಲಿ ಸೀನಿಯರ್ ಹಾಗೂ ಜೂನಿಯರ್ ಇಲ್ಲ. ಅಧಿಕಾರ ಇದ್ದವರೇ ಸೀನಿಯರ್ ಹಾಗೂ ಅಧಿಕಾರ ಇಲ್ಲದವರು ಜೂನಿಯರ್. ಸದನದಲ್ಲಿ ಕುರ್ಚಿ ನೀಡುವಾಗ ಹಿರಿತನ ನೋಡಿ ಕೊಡುವುದಿಲ್ಲ ಎಂದಿದ್ದಾರೆ.
ಈ ವೇಳೆ ನೀವು ಬಿಜೆಪಿಯಲ್ಲಿದ್ದಾಗ ಮುಂದಿನ ಸ್ಥಾನದಲ್ಲಿ ಕುರ್ಚಿ ನೀಡಲಾಗಿತ್ತು. ನಿಮಗೆ ಬೇಕಾದ ಇಲ್ಲಿ ಬರುವುದು. ಬೇಡವಾದಾಗ ಬಿಟ್ಟು ಅಲ್ಲಿ ಹೋದರೆ ಏನು ಏನು ಮಾಡೋದು? ಎಂದು ಪ್ರಶ್ನಿಸಿ ಕಾಲೆಳೆದಿದ್ದಾರೆ. ಇದಕ್ಕೆ ಯತ್ನಾಳ್ ಪ್ರತಿಕ್ರಿಯೆ ನೀಡಿ, ನಾನು ಬೇಕೆಂದಾಗ ಬರುವುದು, ಬಿಡೋದು ಇಲ್ಲಿ ವಿಚಾರ ಅಲ್ಲ. ನಾವೇ ನಿಜವಾದ, ನಿಷ್ಠಾವಂತ ಕಾರ್ಯಕರ್ತ. ನಾನೇ ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಎಂದು ಉತ್ತರಿಸಿದ್ದಾರೆ.
ಈ ಸಂದರ್ಭದಲ್ಲಿ ನಾನು ಅಡ್ಜೆಸ್ಟ್ ಮೆಂಟ್ ಗಿರಾಕಿ ಅಲ್ಲ. ನಾನು ಯಾರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾನು ಸಿಎಂ ಕಚೇರಿಗೆ ಹೋಗಿಲ್ಲ. ಯಾವುದೇ ಮಂತ್ರಿಗಳ ಬಳಿ ದಯಾಪರನಾಗಿ ಕೇಳಿಕೊಂಡಿಲ್ಲ. ನಾನು ನಿಜವಾದ ವಿರೋಧ ಪಕ್ಷದ ನಾಯಕ, ಉಪಾಧ್ಯಕ್ಷರ ಪಕ್ಕದ ಕುರ್ಚಿಯನ್ನು ನನಗೆ ನೀಡಿ ಎಂದು ಈ ವೇಳೆ ಬೇಡಿಕೆ ಇಟ್ಟರು.



