ಬೆಳಗಾವಿ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ವಿಚಾರಗಳ ಕುರಿತು ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ದ್ವೇಷ ಭಾಷಣವನ್ನು ವಿರೋಧಿಸುವ ವಿಧೇಯಕವನ್ನು ಜಾರಿಗೆ ತರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದು, ಹೈದರಾಬಾದ್‌ನ ಓವೈಸಿ ಮತ್ತು ದೆಹಲಿಯ ಇಮಾಮ್‌ನಂತಹವರ ಪ್ರಚೋದನಕಾರಿ ಭಾಷಣಗಳಿಂದ ದ್ವೇಷ ಭಾಷಣ ಪ್ರಾರಂಭವಾಗಿದೆ. ಇದಕ್ಕೆ ಹಿಂದೂಗಳು ಪ್ರತಿಕ್ರಿಯಿಸುವುದು ಅನಿವಾರ್ಯ ಎಂದು ಯತ್ನಾಳ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರದ ವಿರುದ್ದ ಗರಂ ಆಗಿದ್ದು, ಹಿಂದೂ ವಿರೋಧಿ ಕಾನೂನುಗಳನ್ನು ರಚಿಸಲಾಗುತ್ತಿದೆ ಎಂದು ಆರೋಪಿಸಿ, ಗೋಹತ್ಯೆ ನಿಷೇಧ ಕಾಯ್ದೆಯ ಸಡಿಲಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಪುನರಾರಂಭ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುವ ಸಿದ್ಧತೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಕಾಂಗ್ರೆಸ್ ಟಿಪ್ಪುವನ್ನು ಬೆಂಬಲಿಸಿದಾಗಲೆಲ್ಲಾ ನಾಶವಾಗಿದೆ. ಪುನಃ ನಾಶವಾಗಬೇಕಿದ್ದರೆ ಟಿಪ್ಪು ಜಯಂತಿಯನ್ನು ಪ್ರಾರಂಭಿಸಲಿ ಎಂದು ಸವಾಲು ಹಾಕಿದ್ದಾರೆ. ಉತ್ತರ ಕರ್ನಾಟಕದ ವಿಷಯಗಳ ಚರ್ಚೆಗೆ ಅಧಿವೇಶನದಲ್ಲಿ ಅವಕಾಶ ನೀಡುವ ಸರ್ಕಾರದ ನಿರ್ಧಾರವನ್ನು ಇದೀಗ ಯತ್ನಾಳ್ ಸ್ವಾಗತಿಸಿದ್ದಾರೆ.



