ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟಿನ್‌ಗಳು ಇನ್ನು ಮುಂದೆ ಕೆಎಂಎಫ್ ಉತ್ಪನ್ನಗಳ ಮಾರಾಟ ಕೇಂದ್ರಗಳಾಗಿಯೂ ಬದಲಾಗಲಿವೆ.ಬಡವರ ಹಸಿವು ನೀಗಿಸುವ ಕೇಂದ್ರಗಳೆಂದೇ ಬಿಂಬಿತವಾಗಿದ್ದ ಇಂದಿರಾ ಕ್ಯಾಂಟಿನ್‌ಗಳು ಇತ್ತಿಚೆಗೆ ಖಾಲಿ ಹೊಡೆಯುತ್ತಿವೆ ಹೀಗಾಗಿ ಕ್ಯಾಂಟಿನ್‌ಗಳ ಉತ್ತೇಜನಕ್ಕಾಗಿ ಈ ಹೊಸ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಸರ್ಕಾರದ ಪಂಚ ಗ್ಯಾರಂಟಿಗಳಿಂದಾಗಿ ಇಂದಿರಾ ಕ್ಯಾಂಟಿನ್‌ಗಳ ನಿರ್ವಹಣೆಗೆ ಹಣಕಾಸಿನ ತೊಂದರೆ ಎದುರಾಗಿದೆ. ಇರುವ ಕ್ಯಾಂಟಿನ್‌ಗಳಿಗೆ ಬರುತ್ತಿರುವ ಗ್ರಾಹಕರ ಸಂಖ್ಯೆಯೂ ಇಳಿಮುಖವಾಗುತ್ತಿರುವುದರಿಂದ ಕ್ಯಾಂಟಿನ್‌ಗಳಲ್ಲಿ ಬದಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ ಎಂಬ ಬೇಡಿಕೆ ಹೆಚ್ಚಾಗಿತ್ತು.
ಜನರ ಬೇಡಿಕೆ ಮೇರೆಗೆ ಇಂದಿರಾ ಕ್ಯಾಂಟಿನ್‌ಗಳಲ್ಲಿ ಬದಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಕ್ಯಾಂಟಿನ್‌ಗಳಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಂದಿನಿ ಉತ್ಪನ್ನಗಳಿಗೆ ದೇಶಾದ್ಯಂತ ಇನ್ನಿಲ್ಲದ ಬೇಡಿಕೆ ಇದೆ ಅಂತಹ ನಂದಿನಿ ಉತ್ಪನ್ನಗಳನ್ನು ಇಂದಿರಾ ಕ್ಯಾಂಟಿನ್‌ಗಳಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಲಾಭವಾಗಲಿದೆ ಎಂಬ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಣಕಾಸಿನ ತೊಂದರೆ ಎದುರಿಸುತ್ತಿರುವ ಇಂದಿರಾ ಕ್ಯಾಂಟಿನ್‌ಗಳಲ್ಲಿ ನಂದಿನಿ ಉತ್ಪನ್ನಗಳಾದ ಹಾಲು, ತುಪ್ಪ, ಬೆಣ್ಣೆ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ನೀಡಿದರೆ ಕ್ಯಾಂಟಿನ್‌ಗಳ ಮಾಲೀಕರು ಲಾಭ ಮಾಡಿಕೊಳ್ಳುವುದರ ಜೊತೆಗೆ ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟಿನ್‌ಗಳು ಮುಂದುವರೆಯಲಿವೆ ಎಂದು ನಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಸರ್ಕಾರದಿಂದ ಅನುಮತಿ ಸಿಕ್ಕ ಕೂಡಲೆ ಕ್ಯಾಂಟಿನ್‌ಗಳು ನಂದಿನಿ ಪಾರ್ಲರ್‌ಗಳಾಗಿ ಬದಲಾಗಲಿವೆ ಎಂದು ಅವರು ವಿವರಿಸಿದ್ದಾರೆ.



