ಬೆಂಗಳೂರು : ಸಿಎಂ-ಡಿಸಿಎಂ ಪವರ್ ಶೇರಿಂಗ್ ಕಾದಾಟದ ನಡುವೆ ದಲಿತ ಸಿಎಂ ಕೂಗು ಕೂಡ ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿದ್ರೆ ದಲಿತರೇ ಸಿಎಂ ಮಾಡ್ಬೇಕು ಎನ್ನುವ ಆಗ್ರಹ ಜೋರಾಗಿದೆ. ಈ ಕುರಿತು ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರನ್ನ ಒಳಗೊಂಡಂತೆ ಮಹತ್ವದ ಸಭೆ ಕೂಡ ನಡೆದಿದೆ ಎನ್ನಲಾಗುತ್ತಿದ್ದು, ವಾಲ್ಮೀಕಿ ಸಮುದಾಯದವರೇ ಸಿಎಂ ಆಗಬೇಕೆಂದು ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ರೆ ದಲಿತರನ್ನೇ ಸಿಎಂ ಮಾಡ್ಬೇಕು ಎಂದು ವಾಲ್ಮೀಕಿ ಶ್ರೀಗಳು ಒತ್ತಾಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ಮುಂದುವರೆದರೆ ನಮ್ಮ ತಕರಾರಿಲ್ಲ. ಆದರೆ ಅವರನ್ನ ಕೆಳಗಿಳಿಸಿದ್ರೆ ಮಾತ್ರ ದಲಿತರನ್ನೇ ಸಿಎಂ ಮಾಡ್ಬೇಕು ಎಂದಿದ್ದಾರೆ.
ಈ ಸಂರ್ಭದಲ್ಲಿ ದಲಿತರಲ್ಲಿ ಮೂರ್ನಾಲ್ಕು ಮಂದಿ ಪ್ರಬಲ ನಾಯಕರಿದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನಾದರೂ ಮಾಡಲಿ, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮುನಿಯಪ್ಪ ಅವರಲ್ಲಿ ಯಾರನ್ನಾದರೂ ಸಿಎಂ ಮಾಡಿ ಎಂದು ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಖಾಲಿ ಇರುವ ಎರಡು ಸಚಿವ ಸ್ಥಾನಗಳನ್ನ ವಾಲ್ಮೀಕಿ ಸಮುದಾಯಕ್ಕೆ ನೀಡಬೇಕು. ಈ ಸಂಬಂಧ ಇಂದು ಮಧ್ಯಾಹ್ನ ಸಮುದಾಯದ ಶಾಸಕರ ನಿಯೋಗದೊಂದಿಗೆ ಸಿಎಂ ಭೇಟಿ ಮಾಡುತ್ತೇನೆ ಎಂದು ಬೆಳಗಾವಿಯಲ್ಲಿ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ವಾಲ್ಮೀಕಿ ಸ್ವಾಮೀಜಿ, ಮುಖಂಡರ ಸಭೆ ನಡೆದಿದೆ. ಸಮಾಜದ ಸಮಸ್ಯೆ, ಜಾತ್ರೆಯ ಬಗ್ಗೆಯಷ್ಟೇ ನಮ್ಮ ಮಾತು ಎಂದು ಮುಖಂಡರು ಹೇಳಿದರೂ, ಪ್ರಸಕ್ತ ರಾಜಕಾರಣದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ತಮ್ಮ ಸಮುದಾಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಬಹಳ ದೊಡ್ಡ ಜನ ಸಂಖ್ಯೆ ನಮ್ಮದೂ ಇದೆ. ನಾವು ಎಸ್ಸಿ, ಎಸ್ಟಿಗಳು ಸೇರಿದ್ರೆ ಸರ್ಕಾರವನ್ನ ತರಬಹುದು ಎಂಬ ಮಾತುಗಳು ಕೇಳಿ ಬಂದಿದೆ ಎನ್ನಲಾಗುತ್ತಿದೆ ಆದರೆ ನಮಗೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದಿದ್ದಾರೆ.
ಈ ಭಾರಿ ಅದಕ್ಕೆ ನಾವ್ಯಾರು ಅವಕಾಶ ನೀಡಬಾರದು. ಸಂಪುಟ ಪುನಾರಚನೆ ವೇಳೆ ಎರಡು ಸಚಿವ ಸ್ಥಾನ ಸಮುದಾಯಕ್ಕೆ ನೀಡಲೇಬೇಕು. ಸತೀಶ್ ಜಾರಕಿಹೊಳಿ ಜೊತೆ ಇಡಿ ಶಾಸಕರು, ಸಮುದಾಯ ನಿಲ್ಲಬೇಕು. ಅವರು ಹೇಳಿದಂತೆ ನೀವೆಲ್ಲರೂ ಒಟ್ಟಾಗಿ ಮುನ್ನಡೆಯಿರಿ ಎಂದು ಸ್ವಾಮೀಜಿಗಳು ವಾಲ್ಮೀಕಿ ಸಮುದಾಯದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಸತೀಶ್ ಜಾರಕಿಹೊಳಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬೆಂಬಲವಾಗಿ ನಿಲ್ಲೋಣ ಎಂಬ ನಿರ್ಧಾರ ಕೈಗೊಳ್ಳಲಾಗಿದ್ದು, ನಿನ್ನೆ ರಾತ್ರಿ ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಈ ಸಭೆ ನಡೆದಿದೆ. ಸಭೆಯಲ್ಲಿ ಸತೀಶ್ ಜಾರಕಿಹೊಳಿ, ಬಸನಗೌಡ ದದ್ದಲ್, ತುರುವೀಹಾಳ, ಚಳ್ಳಕೆರೆ ರಘುಮೂರ್ತಿ, ಕಂಪ್ಲಿ ಗಣೇಶ್, ಸೇರಿ ಸಮುದಾಯದ ಮುಖಂಡರು ಭಾಗವಹಿಸಿದ್ದರು.



