ಬೆಳಗಾವಿ : ಚಳಿಗಾಲದ ಅಧಿವೇಶನದಲ್ಲಿ ರಾಜಕೀಯ ತಾಪಮಾನ ಗಗನಕ್ಕೇರಿದ ಬೆನ್ನಲ್ಲೇ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ತಡರಾತ್ರಿ ಬೃಹತ್ ಡಿನ್ನರ್ ಮೀಟಿಂಗ್ ಏರ್ಪಡಿಸಿದ್ದು, 40ಕ್ಕೂ ಹೆಚ್ಚು ಶಾಸಕರು ಡಿನ್ನರ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಆಸಕ್ತಿಯ ವಿಷಯ ಏನೆಂದರೆ ಬಿಜೆಪಿಯಿಂದ ಉಚ್ಚಾಟಿತರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಕೂಡ ಈ ಡಿನ್ನರ್ ಸಭೆಯಲ್ಲಿ ಭಾಗಿಯಾಗಿದ್ದು, ಜೊತೆಗೆ ಮಾಗಡಿ ಬಾಲಕೃಷ್ಣ, ಎಂ.ಟಿ.ಬಿ. ಹ್ಯಾರಿಸ್, ಇಕ್ಬಾಲ್ ಹುಸೇನ್, ಗಣಿಗ ರವಿ, ದಿನೇಶ್ ಗೂಳಿಗೌಡ, ರವಿ ಸೇರಿದಂತೆ ಹಲವು ಶಾಸಕರು ಈ ಡಿನ್ನರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ರಹಸ್ಯ ಡಿನ್ನರ್ ಮೀಟಿಂಗ್ ಬೆಳಗಾವಿ ನಗರದ ಹೊರವಲಯದಲ್ಲಿರುವ ಕಾಂಗ್ರೆಸ್ ಮುಖಂಡ, ಯುವ ಉದ್ಯಮಿ ಪ್ರವೀಣ್ ದೊಡ್ಡಣ್ಣನವರ್ ತೋಟದ ಮನೆಯಲ್ಲಿ ಏರ್ಪಡಿಸಿದ್ದು, ರಾತ್ರಿ 10:30ರಿಂದ ಆರಂಭವಾದ ಈ ಭೋಜನ ಸಭೆ ಕೆಲ ಗಂಟೆಗಳ ಕಾಲ ನಡೆದಿದೆ ಎನ್ನಲಾಗಿದೆ. ಇನ್ನೂ ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಸಮರ ಜೋರಾಗಿದ್ದು, ನಾಯಕತ್ವ ಬದಲಾವಣೆ ಕೂಗು ಮತ್ತೆ ಮತ್ತೆ ಸದ್ದು ಮಾಡುತ್ತಿದೆ.
ನಿನ್ನೆ ಕೂಡ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ಕೂಡ ಹಲವು ಚರ್ಚೆಗೆ ಕಾರಣವಾಗಿತ್ತು, ಇದೀಗ ಈ ಹಿನ್ನಲೆ ಡಿಸಿಎಂ ಡಿಕೆ ಶಿವಕುಮಾರ್ ಎಲ್ಲಾ ಶಾಸಕರನ್ನು ಒಟ್ಟುಗೂಡಿ ಡಿನ್ನರ್ ಸಭೆ ನಡೆಸಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ಇದೀಗ ರಾಜಕೀಯ ವಲಯದಲ್ಲಿ ಈ ಡಿನ್ನರ್‌ನ ಹಿಂದಿನ ಉದ್ದೇಶ ಬಗ್ಗೆ ಊಹಾಪೋಹಗಳು ಆರಂಭವಾಗಿದ್ದು, ಬಿಜೆಪಿ ಉಚ್ಚಾಟಿತ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ಈಗಾಗಲೇ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಅಲ್ಲದೇ ರಾಜ್ಯಸಭೆ ಚುನಾವಣೆಗೆ ಲಾಬಿ ನಡೆಸುತ್ತಿದ್ದು, ಮುಂದಿನ ವರ್ಷ ರಾಜ್ಯಸಭೆಗೆ ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ಗೆ 135+ ಮತಗಳು ಬೇಕು. ಈಗಿನ ಸಂಖ್ಯೆ 134. ಈ ಒಂದು ಮತಕ್ಕಾಗಿ ಡಿಕೆಶಿ ತಂತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಪ್ರವೀಣ್ ದೊಡ್ಡಣ್ಣನವರ್ ತೋಟದ ಮನೆ ಬೆಳಗಾವಿ ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು, ಸಂಪೂರ್ಣ ಖಾಸಗಿತನ ಮತ್ತು ಭದ್ರತೆ ಇರುವ ಸ್ಥಳವಾಗಿದೆ. ಮಾಧ್ಯಮಗಳ ಗಮನ ತಪ್ಪಿಸಲು ಈ ಸ್ಥಳವನ್ನು ಆಯ್ಕೆ ಮಾಡಲಾಗಿದ್ದು, ಪ್ರವೀಣ್ ದೊಡ್ಡಣ್ಣನವರ್ ಅವರು ಡಿಕೆಶಿ ಅವರ ಅತ್ಯಂತ ಆಪ್ತರಲ್ಲಿ ಒಬ್ಬರು ಎಂದು ತಿಳಿದುಬಂದಿದೆ.
ಬಿಜೆಪಿ ಈಗಾಗಲೇ ಈ ಡಿನ್ನರ್ ಮೀಟಿಂಗ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದ್ದು, ಕಾಂಗ್ರೆಸ್ ಕುದುರೆ ಖರೀದಿಗೆ ಮುಂದಾಗಿದೆ ಎಂದು ಬಿಜೆಪಿ ವಕ್ತಾರರು ಆರೋಪಿಸಿದ್ದಾರೆ. ತಡರಾತ್ರಿ ನಡೆದ ಈ ಡಿನ್ನರ್ ಮೀಟಿಂಗ್ ಕೇವಲ ಊಟವಲ್ಲ, ರಾಜ್ಯ ರಾಜಕಾರಣದ ಮುಂದಿನ ದಿಕ್ಕನ್ನೇ ಬದಲಾಯಿಸಬಹುದಾದ ರಾಜಕೀಯ ಚೆಸ್ ಮೂವ್ ಆಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಈ ಡಿನ್ನರ್ ಸಭೆ ಬಗ್ಗೆ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಯಾವುದೇ ಔತಣ ಕೂಟ ಇಲ್ಲ ಏನು ಇಲ್ಲ, ನಮ್ಮ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಫ್ಯಾಮಿಲಿ 15 ವರ್ಷದಿಂದ ಕರೆಯುತ್ತಿದ್ದರು. ನಾವು ಯಾರನ್ನು ಮರೆಯಲು ಆಗುವುದಿಲ್ಲ. ಪ್ರತಿದಿನ ಒಬ್ಬೊಬ್ಬರು ಊಟಕ್ಕೆ ಕರೆಯುತ್ತಿದ್ದಾರೆ ಬೇಡ ಅನ್ನಲು ಆಗುತ್ತಾ? ನಾಳೆ ಆಸಿಫ್ ಶೇಟ್ ಕರೆದಿದ್ದಾರೆ. ಒಂದೊಂದು ದಿನ ಹೋಗುವುದು ಎಂದು ಡಿ.ಕೆ ಶಿವಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.



