ಬೆಳಗಾವಿ : ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿದ ಕೂಡಲೇ ಡಿಕೆಶಿ ಸಿಎಂ ಆಗ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಎಂಎಲ್ಎ ಆಗಿಲ್ಲವೇ, ಹಾಗೇ ಡಿಕೆ ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ ಅವರು ಸಿಎಂ ಆಗುತ್ತಾರೆ” ಎಂದು ಭವಿಷ್ಯ ನುಡಿದಿದ್ದಾರೆ.
ನಿನ್ನೆ ನಾವು 55 ಜನ ಶಾಸಕರು ಊಟಕ್ಕೆ ಸೇರಿದ್ದೆವು. ಊಟ ಮಾಡಿದ್ದೇವೆ ಅಷ್ಟೇ. ನಮಗೆ ಡಿಕೆ ಶಿವಕುಮಾರ್ ಸಿಎಂ ಆಗಬೇಕು, ಆಗುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಯಾರಿಗೆ ಯಾವಾಗ ಜ್ಞಾನೋದಯ ಆಗುತ್ತೋ ಗೊತ್ತಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯಗೆ ಇಕ್ಬಾಲ್ ಹುಸೇನ್ ಈ ಮೂಲಕ ತಿರುಗೇಟು ನೀಡಿದ್ದು, ಇದೇ ಸಂದರ್ಭದಲ್ಲಿ ಫಲಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಡಿಕೆ ಶಿವಕುಮಾರ್ ಕಷ್ಟಪಟ್ಟದಕ್ಕೆ ಫಲ ಸಿಗುತ್ತದೆ. ಆದಷ್ಟು ಬೇಗ ಆಗುತ್ತದೆ. ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಒಳ್ಳೆಯದು ಆಗಿಯೇ ಆಗುತ್ತದೆ. ನಂಬರ್ ಮುಖ್ಯ ಅಲ್ಲ, ಹೈಕಮಾಂಡ್ ನ ನಿರ್ದೇಶನ ಮುಖ್ಯ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೈಕಮಾಂಡ್ ಹೇಳಿದರೆ ಯಾರು ಯಾಕೆ ಎಂದು ಕೇಳಲ್ಲ. ಸಂಖ್ಯಾಬಲ ಮುಖ್ಯ ಅಲ್ಲ. ಹಾಗಿದ್ದರೂ ಗುರುವಾರ ನಡೆದ ಡಿನ್ನರ್ ಮೀಟಿಂಗ್ ಗೆ 55 ಜನರು ಡಿನ್ನರ್ ಸೇರಿದ್ದರೂ ಆದರೆ ಅಲ್ಲಿ ರಾಜಕೀಯ ಚರ್ಚೆ ಆಗಿಲ್ಲ. ಎಲ್ಲ 224 ಜನ ಶಾಸಕರೂ ಕರೆದರೆ ಊಟಕ್ಕೆ ಬರ್ತಾರೆ. ಡಿ.ಕೆ ಶಿವಕುಮಾರ್ ಊಟಕ್ಕೆ ಕರೆದರೆ ಎಲ್ಲರೂ ಬರ್ತಾರೆ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಂತಲ್ಲ. ವಿಶ್ವಾಸ ಪ್ರೀತಿ ಒಂದು ಬಾಂಧವ್ಯ. ಎಲ್ಲರೂ ಡಿಕೆಶಿಗೆ ಆತ್ಮೀಯರೇ, ಎಲ್ಲರೂ ಸ್ನೇಹಿತರೇ. ಅವರವರ ಪಕ್ಷದಲ್ಲಿ ಗುರುತಿಸಿಕೊಳ್ತಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಗೆ ಶಾಸಕರ ಬೆಂಬಲ ಇದೆ ಎಂದು ತಿಳಿಸಿದ್ದಾರೆ.



