Sunday, December 14, 2025
Google search engine

Homeರಾಜ್ಯಸುದ್ದಿಜಾಲವಿಮಾನದಲ್ಲೇ ಚಿಕಿತ್ಸೆ: ಅಮೆರಿಕ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಳರ್‌.

ವಿಮಾನದಲ್ಲೇ ಚಿಕಿತ್ಸೆ: ಅಮೆರಿಕ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಳರ್‌.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ಗೋವಾದಿಂದ ನವದೆಹಲಿಗೆ ಹಾರಿದ ಇಂಡಿಗೊ ವಿಮಾನದಲ್ಲಿ ಶನಿವಾರ, ಪ್ರಾಣಾಪಾಯದಲ್ಲಿದ್ದ ಅಮೆರಿಕನ್ ಮಹಿಳೆಗೆ ಖಾನಾಪುರದ ಮಾಜಿ ಶಾಸಕಿ, ಎಐಸಿಸಿ ಗೋವಾ ಪ್ರಭಾರಿಯೂ ಆಗಿರುವ ಡಾ.ಅಂಜಲಿ ನಿಂಬಾಳ್ಳ‌ರ್ ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ.

ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ನಗರದ ಮಹಿಳೆ ಜೆನ್ನಿ ಎನ್ನುವವರು ತೀವ್ರ ಅಸ್ವಸ್ಥರಾಗಿ ಕುಸಿದರು. ಮೈ ನಡುಕ ಆರಂಭವಾಗಿ ನಿತ್ರಾಣಗೊಂಡರು. ಅವರ ರಕ್ತದೊತ್ತಡ ತೀವ್ರ ಕಡಿಮೆಯಾಯಿತು. ನಾಡಿಮಿಡಿತ ಕೂಡ ನಿಲ್ಲುವ ಹಂತಕ್ಕೆ ತಲುಪಿತ್ತು. ಕಣ್ಣು ಮುಚ್ಚಿ ನರಳಾಡಿದ ಮಹಿಳೆ ಸಂಪೂರ್ಣ ನಿತ್ರಾಣಗೊಂಡರು. ಅದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಡಾ.ಅಂಜಲಿ ಮಹಿಳೆಯ ನೆರವಿಗೆ ಧಾವಿಸಿದರು. ಹೃದಯ ಸಮಸ್ಯೆಗೆ ನೀಡುವ ‘ಕಾರ್ಡಿಯೋ ಪಲ್ಮನರಿ ರಿಸಸ್ಪಿಟೇಶನ್ (ಸಿಪಿಆ‌ರ್)’ ಎಂಬ ತುರ್ತು ಚಿಕಿತ್ಸೆ ನಡೆಸಿದರು.
ಇದರಿಂದ ತುಸು ಸುಧಾರಿಸಿಕೊಂಡ ಮಹಿಳೆ ಸೀಟಿನಲ್ಲೇ ಒರಗಿಕೊಂಡರು. ಅರ್ಧ ಗಂಟೆ ನಂತರ ಮತ್ತೆ ಅದೇ ಸಮಸ್ಯೆ ಕಾಣಿಸಿತು. ಆಗ ಡಾ.ಅಂಜಲಿ ಅವರು ರೋಗಿಯ ಪಕ್ಕದಲ್ಲೇ ನಿಂತು ನಿರಂತರ ಚಿಕಿತ್ಸೆ ನೀಡಿದರು. ಇದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾದರು.
ವಿಮಾನ ಇಳಿಯುವಾಗ ರನ್‌ವೇಯಲ್ಲಿ ಆಂಬುಲೆನ್ಸ್‌ ಸಿದ್ಧವಾಗಿರುವಂತೆ ವಿಮಾನ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿದ ಡಾ.ಅಂಜಲಿ, ತಕ್ಷಣವೇ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ವ್ಯವಸ್ಥೆ ಮಾಡಿದರು.
*30 ಸಾವಿರ ಅಡಿ ಎತ್ತರದಲ್ಲಿ ಅಮೂಲ್ಯ ಜೀವವನ್ನು ಉಳಿಸಿದ ಡಾ.ಅಂಜಲಿ ನಿಂಬಾಲ್ಕ‌ರ್ ಅವರು ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿಗೆ ಸಾಕ್ಷಿಯಾದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ಹರಿದಾಡಿದವು.

ಮಾನವೀಯತೆ ಮೆರೆದ ವೈದ್ಯೆಯನ್ನು ವಿಮಾನದ ಪೈಲಟ್‌, ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಪ್ರಶಂಸಿಸಿದರು.

‘ವಿಮಾನಗಳಲ್ಲಿರಲಿ ಕನಿಷ್ಠ ವೈದ್ಯಕೀಯ ಸಲಕರಣೆ’
‘ಜೆನ್ನಿ ಅವರು ಪ್ರಾಣಾಪಾಯದ ಅಂಚಿಗೆ ತಲುಪಿದ್ದರು. ಒಂದು ಕ್ಷಣ ನನಗೂ ಭಯವಾಯಿತು. ಆದರೆ, ಅವರ ಪ್ರಾಣ ಇಳಿಸಲು ಏನು ಬೇಕೋ ಅದನ್ನು ಮಾಡಿದೆ. ತುಸು ಚೇತರಿಸಿಕೊಂಡ ಜೆನ್ನಿ ‘ನೀವು ನನ್ನಪಾಲಿಗೆ ಮೇರಿ ಮಾತೆ ಆಗಿ ಬಂದಿರಿ’ ಎಂದರು’ ಎಂದು ಡಾ.ಅಂಜಲಿ ನಿಂಬಾಳಕರ ಪ್ರತಿಕ್ರಿಯೆ ನೀಡಿದರು.
“ನಿರ್ಜಲೀಕರಣ, ಆಹಾರ ಸಮಸ್ಯೆ ಅಥವಾ ಯಾವುದೋ ಮಾತ್ರೆ ಸೇವಿಸಿದಾಗ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೇ ಸೆಕೆಂಡುಗಳಲ್ಲಿ ಚಿಕಿತ್ಸೆ ಕೊಡದಿದ್ದರೆ ಹೃದಯ ಬಡಿತ ನಿಲ್ಲುತ್ತದೆ. ವೈದ್ಯಕೀಯ ಸಲಕರಣೆಗಳು ಇದ್ದಾಗಲೂ ಪ್ರಾಣ ಉಳಿಯುವುದು ಕಷ್ಟ. ಇಂಥ ತುರ್ತು ಸಂದರ್ಭಗಳಲ್ಲಿ ವಿಮಾನಗಳಲ್ಲಿ ಕನಿಷ್ಠ ವೈದ್ಯಕೀಯ ಸಲಕರಣೆಗಳು ಇರಬೇಕು. ಒಂದು ಐವಿ ಸೆಟ್ ಇದ್ದರೆ ಎಷ್ಟೋ ಅನುಕೂಲ’ ಎಂದು ಡಾ.ಅಂಜಲಿ ಹೇಳಿದರು.
‘ಜೆನ್ನಿ ಅವರು ಅತ್ತೆ ದೆಹಲಿಯಲ್ಲಿ ಮಹಿಳಾ ತಜ್ಞ ವೈದ್ಯರಾಗಿದ್ದು, ಅವರ ಹೆಸರ ಕೂಡ ಅಂಜಲಿ. ಜೆನ್ನಿ ಅವರನ್ನು ದೆಹಲಿಯಲ್ಲಿ ಆಂಬುಲೆನ್ಸ್‌ಗೆ ಸೇರಿಸಿದ ಮೇಲೆ ಅವರ ಅತ್ತೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ ನಂತರವೇ ನನ್ನ ಕೆಲಸಕ್ಕೆ ಹೋದೆ’ ಎಂದೂ ತಿಳಿಸಿದರು.

RELATED ARTICLES
- Advertisment -
Google search engine

Most Popular