Wednesday, December 17, 2025
Google search engine

Homeರಾಜಕೀಯಬೆಳಗಾವಿಯಲ್ಲಿ ಮತ್ತೆ ಗರಿಗೆದರಿದ ಡಿನ್ನರ್‌ ಪಾಲಿಟಿಕ್ಸ್‌

ಬೆಳಗಾವಿಯಲ್ಲಿ ಮತ್ತೆ ಗರಿಗೆದರಿದ ಡಿನ್ನರ್‌ ಪಾಲಿಟಿಕ್ಸ್‌

ಬೆಳಗಾವಿ: ಡಿಸಿಎಂ ಡಿಕೆ ಶಿವಕುಮಾರ್ ಆಪ್ತರಿಗೆ ಡಿನ್ನರ್ ಪಾರ್ಟಿ ಹಮ್ಮಿಕೊಂಡ ಬೆನ್ನಲ್ಲೇ ಇದೀಗ ಎಸ್ ಸ್, ಎಸ್ ಟಿ ಶಾಸಕರಿಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತ್ಯೇಕ ಔತಣಕೂಟ ಆಯೋಜಿಸಿದ್ದು, ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ರಾತ್ರಿ ಡಿನ್ನರ್ ಮೀಟಿಂಗ್ ಗೆ ಶಾಸಕರು ಹಾಗೂ ಪರಿಷತ್ ಸದಸ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಆಪ್ತರೊಬ್ಬರ ಮೂಲಕ ಶಾಸಕರಿಗೆ ಔತಣಕೂಟ ಹಮ್ಮಿಕೊಂಡಿದ್ದರು. ಈ ಔತಣಕೂಟದಲ್ಲಿ ಡಿಕೆಶಿ ಕ್ಯಾಂಪ್ ನಲ್ಲಿ ಗುರುತಿಸಿಕೊಂಡಿರುವ ಶಾಸಕರು ಇದರಲ್ಲಿ ಭಾಗಿಯಾಗಿದ್ದರು. ಆದರೆ ಔತಣ ಕೂಟದಲ್ಲಿ ರಾಜಕೀಯ ಚರ್ಚೆ ಆಗಿಲ್ಲ ಎಂದು ಆ ಬಗ್ಗೆ ಆಪ್ತರೊಬ್ಬರು ಆಹ್ವಾನ ಕೊಟ್ಟಿದ್ದರು, ಹಾಗಾಗಿ ಭಾಗಿಯಾಗಿದ್ದೆವು ಎಂದಿದ್ದರು.

ಆದರೆ ಸಿದ್ದರಾಮಯ್ಯ ಬಣ ಡಿನ್ನರ್ ಮೀಟಿಂಗ್ ನಲ್ಲಿ ಭಾಗಿಯಾಗಿಲ್ಲ ಎಂಬುದು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಸಂದರ್ಭದಲ್ಲಿ ಔತಣಕೂಟಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಕೆಲವೊಂದು ಡಿನ್ನರ್ ಮೀಟಿಂಗ್ ಗಳು ನಾನಾ ವ್ಯಾಖ್ಯಾನಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ.

ಇನ್ನೂ ಸಿಎಂ ರೇಸ್ ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕೂಡಾ ಮುಂಚೂಣಿಯಲ್ಲಿದ್ದು, ಈ ಹಿಂದೆ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಪರವಾಗಿ ಬ್ಯಾಟಿಂಗ್ ಮಾಡಿದ್ದರು. ಅಹಿಂದ ನಾಯಕತ್ವ ವಹಿಸಲು ಸತೀಶ್ ಸೂಕ್ತ ವ್ಯಕ್ತಿ ಎಂದು ಹೇಳಿಕೊಂಡಿದ್ದರು.

ಇದು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸತೀಶ್ ಜಾರಕಿಹೊಳಿ ಎಸ್ ಟಿ/ಎಸ್ ಸಿ ಸಚಿವರಿಗೆ ಪ್ರತ್ಯೇಕ ಔತಣಕೂಟ ಹಮ್ಮಿಕೊಂಡಿರುವುದು ಏನು ಸಂದೇಶ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ. ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಎಸ್ ಸಿ/ಎಸ್ ಟಿ ಶಾಸಕರ ವಿಶ್ವಾಸಗಳಿಸುವುದು ಇದರ ಹಿಂದಿನ ಉದ್ದೇಶವೇ? ಎಂಬ ಕುತೂಹಲ ಕೆರಳಿಸಿದ್ದು, ಒಟ್ಟಾರೆ ಈ ಡಿನ್ನರ್ ಮೀಟಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ಕಾಂಗ್ರೆಸ್ ನಲ್ಲಿ ಸದ್ದು ಮಾಡುತ್ತಿದೆ. ನಾಯಕತ್ವ ಬದಲಾವಣೆ ಗದ್ದಲ ತೀವ್ರಗೊಳ್ಳುತ್ತಿರುವಂತೆ ಡಿನ್ನರ್ ಭರಾಟೆಯೂ ಹೆಚ್ಚಾಗುತ್ತಿರುವುದು ಕುತೂಹಲ ಕೆರಳಿಸಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular