ಮಂಗಳೂರು: ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮತ್ತೆ ಗಡೀಪಾರು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಹೋರಾಟಗಾರ ಎಂದು ಗುರುತಿಸಲಾದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮತ್ತೆ ಜಿಲ್ಲೆಯಿಂದ ಗಡೀಪಾರು ಮಾಡಲಾಗಿದ್ದು, ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಈ ಗಡೀಪಾರು ಆದೇಶ ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಲಾಗಿದ್ದು, ಇದು ತಿಮರೋಡಿ ಅವರಿಗೆ ಎರಡನೇ ಬಾರಿಯ ಗಡೀಪಾರು ಆದೇಶವಾಗಿದ್ದು, ಕಳೆದ ಕೆಲವು ಕೇಸ್‌ಗಳೊಂದಿಗೆ ಹಾಲಿ ಪ್ರಕರಣಗಳನ್ನು ಸೇರಿಸಿ ಗಡೀಪಾರು ಮಾಡಲಾಗಿದೆ.
ಇನ್ನೂ ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಮತ್ತೆ ಗಡಿಪಾರು ಸಂಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಿಂದ ಗಡೀಪಾರುಗೊಂಡಿದ್ದ ತಿಮರೋಡಿ, ಹೈಕೋರ್ಟ್ ಮೆಟ್ಟಿಲೇರಿ ರಿಲೀಫ್ ಪಡೆದಿದ್ದರು. ಆದರೆ ಇದೀಗ ಮತ್ತೆ ಗಡೀಪಾರು ಆದೇಶ ಹೊರಡಿಸಲಾಗಿದೆ. ಪೊಲೀಸರು ನಿರಂತರವಾಗಿ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ನಿಗಾ ಇರಿಸಿದ್ದು, ಕಳೆದ ಸೆಪ್ಟೆಂಬರ್ 18ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಸೆಪ್ಟೆಂಬರ್ 18, 2025ರಿಂದ ಸೆಪ್ಟೆಂಬರ್ 17, 2026ರವರೆಗೆ ಒಂದು ವರ್ಷದ ಅವಧಿಗೆ ಗಡೀಪಾರು ಆದೇಶ ಮಾಡಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ಸರಹದ್ದಿಗೆ ಗಡೀಪಾರು ಮಾಡಲಾಗಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ವೇಳೆ ಹೈಕೋರ್ಟ್ ವಿಚಾರಣೆ ನಡೆಸಿ, ಪುತ್ತೂರು ಸಹಾಯಕ ಆಯುಕ್ತರ ಗಡೀಪಾರು ಆದೇಶವನ್ನು ರದ್ದುಪಡಿಸಿತ್ತು. ಕಾನೂನು ಪ್ರಕಾರ ಹೊಸ ಪ್ರಕ್ರಿಯೆ ನಡೆಸಿ ಆದೇಶ ಮಾಡುವಂತೆ ಸೂಚಿಸಿತ್ತು. ಸೆಕ್ಷನ್ ಸರಿಪಡಿಸಿ ಹೊಸ ಆದೇಶ ನೀಡುವಂತೆ ಪುತ್ತೂರು ಎಸಿಗೆ ನಿರ್ದೇಶನ ನೀಡಿತ್ತು. ಇದರಂತೆ ಕೆಲ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಿ, ಮೊನ್ನೆಯಷ್ಟೇ ತಿಮರೋಡಿ ಅವರಿಗೆ ಮತ್ತೆ ಗಡೀಪಾರು ನೋಟೀಸ್ ನೀಡಲಾಗಿತ್ತು.
ನೋಟಿಸ್ ಪಡೆದ ತಿಮರೋಡಿ ಡಿಸೆಂಬರ್ 7ರಂದು ಸಹಾಯಕ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸಿದ್ದರು. ವಕೀಲರ ಮೂಲಕ ವಾದ ಮಂಡಿಸಿ, ಗಡೀಪಾರು ಆದೇಶ ರದ್ದುಪಡಿಸುವಂತೆ ಕೋರಿದ್ದರು. ಈಗ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ವಾದ-ಪ್ರತಿವಾದ ಆಲಿಸಿ, ಮತ್ತೆ ಗಡೀಪಾರು ಆದೇಶ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಮರೋಡಿ ಅವರ ವಿರುದ್ಧ ಸೂಕ್ತ ಕಾರಣಗಳೊಂದಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧಾರದಲ್ಲಿ ಹೊಸ ಆದೇಶ ಹೊರಬಿದ್ದಿದೆ.
ತಿಮರೋಡಿ ವಿರುದ್ಧ ಈ ಹಿಂದಿನ ಕೇಸ್‌ಗಳ ಜೊತೆಗೆ ಹಾಲಿ ಕೆಲ ಪ್ರಕರಣಗಳನ್ನು ಸೇರಿಸಿ ಗಡೀಪಾರು ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಕದಡುವ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂಬ ಆರೋಪವಿದ್ದು, ಈಗ ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಲಾಗಿದ್ದು, ಅವರು ಜಿಲ್ಲೆಯನ್ನು ತೊರೆಯಬೇಕಿದೆ. ಈ ಆದೇಶದಿಂದ ದಕ್ಷಿಣ ಕನ್ನಡದಲ್ಲಿ ಕಠಿಣ ಕ್ರಮಗಳು ಮುಂದುವರಿಯುತ್ತಿವೆ. ಈ ಬಗ್ಗೆ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದು, ಪೊಲೀಸರು ಕಾನೂನುಬದ್ಧವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಎರಡನೇ ಬಾರಿಗೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.



