ನವದೆಹಲಿ: ಕೇರಳದ ಆರು ರಸ್ತೆ ಯೋಜನೆಗೆ ಸಂಬಂಧಿಸಿದಂತೆ ವಯನಾಡ್ ಸಂಸದೆ ಪ್ರಿಯಾಂಕಾ ವಾದ್ರಾ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಈ ವೇಳೆ ಕೆಲವು ಯೋಜನೆಗಳು ಕೇರಳ ಸರ್ಕಾರದ ಅಡಿಯಲ್ಲಿ ಬರುತ್ತವೆ. ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಕೇಂದ್ರದ ಅಡಿಯಲ್ಲಿ ಬರುವ ಯೋಜನೆಗಳನ್ನು ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದರು ಎನ್ನಲಾಗಿದೆ.
ಮಾತುಕತೆಯ ವೇಳೆ ಗಡ್ಕರಿ ಇತ್ತೀಚಿಗೆ ನಿಮ್ಮ ಸಹೋದರ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರ ರಾಯ್‌ಬರೇಲಿಯ ರಸ್ತೆಯ ಬಗ್ಗೆ ಭೇಟಿಯಾದ ವಿಚಾರವನ್ನು ಪ್ರಸ್ತಾಪಿಸಿ, ನಿಮ್ಮ ಸಹೋದರನ ಕೆಲಸಗಳನ್ನು ಮಾಡಿ ನಿಮ್ಮ ಕ್ಷೇತ್ರದ ಕೆಲಸಗಳನ್ನ ಮಾಡಿಲ್ಲ ಎಂದರೆ ಮಾಡಿಕೊಟಿಲ್ಲ ಎಂದು ದೂರುತ್ತೀರಿ ಅಲ್ವಾ ಎಂದು ಹೇಳಿ ಕಾಲೆಳೆದಿದ್ದಾರೆ. ಗಡ್ಕರಿ ಅವರ ಈ ಮಾತಿಗೆ ಅಲ್ಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲಿದರು.
ಈ ವೇಳೆ ಗಡ್ಕರಿ ಮಾತಿಗೆ ಪ್ರಿಯಾಂಕಾ ವಾದ್ರಾ, ಎಡ ಸರ್ಕಾರದ ವ್ಯಾಪ್ತಿಯಲ್ಲಿರುವ ಕೇರಳಕ್ಕೆ ಸಂಬಂಧಿಸಿದ ತಮ್ಮ ಪ್ರಸ್ತಾವನೆಗಳನ್ನು ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಿರು ಮಾತುಕತೆಯ ಸಮಯದಲ್ಲಿ ಯೂಟ್ಯೂಬ್ ನೋಡಿ ತಾವು ಮಾಡಿದ ಅಕ್ಕಿ ಉಂಡೆಯನ್ನು ಸವಿಯಬೇಕೆಂದು ತಿಂಡಿಯನ್ನು ಪ್ರಿಯಾಂಕಾ, ದೀಪೇಂದರ್ ಸಿಂಗ್ ಹೂಡಾಗೆ ಕೇಳಿಕೊಂಡರು. ಗಡ್ಕರಿ ಮನವಿಯ ಮೇರೆಗೆ ಪ್ರಿಯಾಂಕಾ ವಾದ್ರಾ ತಿಂಡಿಯನ್ನು ಸವಿದರು.



