Friday, December 19, 2025
Google search engine

Homeರಾಜ್ಯಪರಮೇಶ್ವರ್ ರಾಜ್ಯದ ಮುಖ್ಯಮಂತ್ರಿ ಆಗಲಿ: ಮಠಾಧೀಶರ ಒತ್ತಾಯ

ಪರಮೇಶ್ವರ್ ರಾಜ್ಯದ ಮುಖ್ಯಮಂತ್ರಿ ಆಗಲಿ: ಮಠಾಧೀಶರ ಒತ್ತಾಯ

ತುಮಕೂರು: ಸಜ್ಜರು, ವಿದ್ಯಾವಂತರು ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ನೇಮಕ ಮಾಡುವಂತೆ ಕಾಂಗ್ರೆಸ್ ಹೈ ಕಮಾಂಡ್‌ಗೆ ತುಮಕೂರು ಜಿಲ್ಲೆಯ ವಿವಿಧ ಮಠಾಧೀಶರು ಒತ್ತಾಯಿಸಿದ್ದಾರೆ.

ನಗರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಮಠಾಧಿಪತಿಗಳು, ಪರಮೇಶ್ವರ್ ಅವರು ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ, ಎರಡು ಬಾರಿಯೂ ಪಕ್ಷವನ್ನು ಮುನ್ನೆಡೆಸಿ, ಒಮ್ಮೆ ಪೂರ್ಣ ಬಹುಮತದೊಂದಿಗೆ, ಮತ್ತೊಮ್ಮೆ ಜೆಡಿಎಸ್ ಪಕ್ಷದ ಸಹಕಾರದೊಂದಿಗೆ ಅಧಿಕಾರ ಹಿಡಿಯಲು ಕಾರಣಕರ್ತರಾಗಿದ್ದರು ಅಲ್ಲದೆ, ಮೂರು ಬಾರಿ ಗೃಹ ಸಚಿವರಾಗಿ, ವಿವಿಧ ಮಂತ್ರಿ ಪದವಿಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಅವರನ್ನು ಪಕ್ಷದ ಹೈಕಮಾಂಡ್ ಮುಖ್ಯ ಮಂತ್ರಿಯಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ.

ಇನ್ನೂ ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಯೋಜನೆಗಳ ಹಿಂದೆ ಡಾ.ಜಿ.ಪರಮೇಶ್ವರ್ ಅವರ ಶ್ರಮವಿದೆ. ದೂರದೃಷ್ಟಿಯುಳ್ಳ ಇಂತಹ ವ್ಯಕ್ತಿಗಳು ಮುಖ್ಯಮಂತ್ರಿಗಳಾದರೆ ರಾಜ್ಯ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಹಾಗಾಗಿ ಪಕ್ಷದ ಹೈಕಮಾಂಡ್ ನಮ್ಮ ಒತ್ತಾಯಪೂರ್ವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಎಂದು ತಿಳಿಸಿದ್ದಾರೆ.

ತುಮಕೂರು ಜಿಲ್ಲೆ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಿಗೆ ರಹದಾರಿ ಕಲ್ಪಿಸಿದೆ. ಪ್ರಮುಖ ಕೈಗಾರಿಕಾ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ಅಲ್ಲದೆ, ಮೆಟ್ರೋ ಸೇರಿದಂತೆ ವಿವಿಧ ಸಂಪರ್ಕ ಯೋಜನೆಗಳು ವಿಸ್ತಾರಗೊಳ್ಳುವ ಹಂತದಲ್ಲಿವೆ. ಈ ವೇಳೆ ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ದೊರೆತರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗಲಿದೆ ಅಲ್ಲದೇ ಮೈಸೂರು, ಶಿವಮೊಗ್ಗ, ಹಾಸನ ಇವುಗಳು ಮುಖ್ಯಮಂತ್ರಿಗಳ ಕ್ಷೇತ್ರ ಎಂಬ ಕಾರಣಕ್ಕೆ ಎಲ್ಲಾ ರೀತಿಯಿಂದ ಅಭಿವೃದ್ಧಿಯಾಗಿವೆ ಎಂದಿದ್ದಾರೆ.

ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ದೊರೆತರೆ ಅಭಿವೃದ್ಧಿಯ ವೇಗ ಮತ್ತಷ್ಟು ದ್ವಿಗುಣಗೊಳ್ಳಲಿದೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ನಮ್ಮಕೋರಿಕೆಯನ್ನು ಮನ್ನಿಸಿ, ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಈ ಸಂಬಂಧ ಅಗತ್ಯ ಬಿದ್ದರೆ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು, ಎಐಸಿಸಿ ಪ್ರಮುಖರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲು ಸಹ ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕುಂಚಟಿಗ ಸಂಸ್ಥಾನ ಮಠದ ಡಾ. ಶ್ರೀ ಹನುಮಂತನಾಥ ಸ್ವಾಮಿಜಿ, ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ತಿಪಟೂರಿನ ಷಡಕ್ಷರ ಮಠದ ಶ್ರೀಷಡಕ್ಷರ ಮುನಿ ಸ್ವಾಮೀಜಿ, ಅರೆಶಂಕರಮಠದ ಶ್ರೀಸಿದ್ದರಾಮಚೈತನ್ಯ ಸ್ವಾಮೀಜಿ, ವಿಶ್ವಕರ್ಮ ಮಠದ ಶ್ರೀನೀಲಕಂಠ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಮೃತ್ಯುಂಜಯ ಸ್ವಾಮೀಜಿ, ಬಿಂದುಶೇಖರ ಒಡೆಯರ್, ಶ್ರೀವಿದ್ಯಾ ವಿಭವಸ್ವಾಮೀಜಿ ಸೇರಿದಂತೆ 25ಕ್ಕೂ ಹೆಚ್ಚು ಸ್ವಾಮಿಜಿಗಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular