ಗುವಾಹಟಿ: ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು 8 ಆನೆಗಳು ಸಾವನ್ನಪ್ಪಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ. ಘಟನೆಯಲ್ಲಿ ಒಂದು ಮರಿ ಆನೆ ಗಂಭೀರವಾಗಿ ಗಾಯಗೊಂಡಿದೆ.
ಅಲ್ಲದೇ ಈ ದುರ್ಘಟನೆಯಿಂದ ರೈಲಿನ 5 ಬೋಗಿಗಳು ಹಾಗೂ ರೈಲಿನ ಎಂಜಿನ್ ಹಳಿ ತಪ್ಪಿದ್ದು, ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಅಪಘಾದಿಂದ ಹಲವು ರೈಲು ಮಾರ್ಗಗಳನ್ನ ಬದಲಾವಣೆ ಮಾಡಲಾಗಿದೆ. ಆದ್ರೆ ಘಟನೆಯಲ್ಲಿ ಯಾವುದೇ ಪ್ರಯಾಣಿಕರ ಪ್ರಾಣಹಾನಿಯಾಗಿಲ್ಲ ಎಂದು ಈಶಾನ್ಯ ಗಡಿನಾಡು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಿಜೋರಾಂನ ಸೈರಂಗ್ (ಐಜಾಲ್ ಬಳಿ) ನಿಂದ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ ವರೆಗೆ ತೆರಳುತ್ತಿದ್ದ ಮೇಳೆ ನಸುಕಿನ ಜಾವ 2:17ರ ವೇಳೆಗೆ ಘಟನೆ ನಡೆದಿದೆ. ಘಟನೆ ಬಳಿಕ ಹಲವಾರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮುನಾಮುಖ್-ಕಂಪುರ ವಿಭಾಗದ ಮೂಲಕ ಹಾದುಹೋಗುವ ರೈಲುಗಳನ್ನ ಉತ್ತರ ಪ್ರದೇಶ ಮಾರ್ಗಕ್ಕೆ ತಿರುಗಿಸಲಾಗಿದೆ ಎಂದು ನಾಗಾಂವ್ ವಿಭಾಗೀಯ ಅರಣ್ಯ ಅಧಿಕಾರಿ ಸುಭಾಷ್ ಕದಮ್ ತಿಳಿಸಿದ್ದಾರೆ.
ಇತ್ತ ರೈಲು ಡಿಕ್ಕಿ ಹೊಡೆದ ರಭಸಕ್ಕೆ ರೈಲು ಹಳಿ ತಪ್ಪಿದ್ದು, ಜೊತೆಗೆ ಹಳಿಗಳ ಮೇಲೆ ಆನೆಗಳ ದೇಹ ಭಾಗಗಳು ಹರಡಿಕೊಡಿವೆ. ಇದರಿಂದಾಗಿ ಅಸ್ಸಾಂ ಮತ್ತು ಈಶಾನ್ಯದ ಇತರ ಭಾಗಗಳಿಗೆ ರೈಲು ಸಂಚಾರಕ್ಕೆ ತೊಂದರೆಯಾಗಿದ್ದು, ಹಾನಿಗೊಳಗಾದ ಬೋಗಿಗಳ ಪ್ರಯಾಣಿಕರನ್ನು ರೈಲಿನ ಇತರ ಖಾಲಿ ಬೋಗಿಗಳಿಗೆ ಸ್ಥಳಾಂತರಿಸಲಾಗಿದೆ. ರೈಲು ಗುವಾಹಟಿಯನ್ನು ತಲುಪಿದ ನಂತರ, ಎಲ್ಲಾ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿ, ರೈಲು ಪ್ರಯಾಣವನ್ನು ಮುಂದುವರಿಸಲಿದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳ ಪ್ರಕಾರ, ಈ ದುರ್ಘಟನೆ ನಡೆದ ಸ್ಥಳವು ಆನೆಗಳ ಸಂಚಾರಕ್ಕೆ ನಿರ್ದಿಷ್ಟವಾಗಿ ಗುರುತಿಸಲಾದ ಕಾರಿಡಾರ್ ಅಲ್ಲ. ರೈಲಿನ ಲೋಕೋ ಪೈಲಟ್, ಹಳಿಗಳ ಮೇಲೆ ಆನೆಗಳ ಹಿಂಡನ್ನು ನೋಡಿದ ತಕ್ಷಣ ತುರ್ತು ಬ್ರೇಕ್ ಹಾಕಿದ್ದಾರೆ. ಆದರೂ, ಆನೆಗಳು ರೈಲಿಗೆ ಅಡ್ಡ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.



