Tuesday, December 23, 2025
Google search engine

Homeಅಪರಾಧಪತ್ನಿಯನ್ನು ಹತ್ಯೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನ

ಪತ್ನಿಯನ್ನು ಹತ್ಯೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನ

ಬೆಂಗಳೂರು : ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿ ಬಚಾವಾಗಲು ಯತ್ನಿಸಿ ಪೊಲೀಸ್ ಬಲೆಗೆ ಬಿದ್ಧ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಪತ್ನಿಯನ್ನು ಹತ್ಯೆ ಮಾಡಿದ ಆತ ಅದನ್ನು ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಯಲಹಂಕದ ಬೊಮ್ಮಸಂದ್ರದ ಬಳಿ ವಾಸವಿದ್ದ ಅನಂತ್ (64) ಎಂಬಾತ ತನ್ನ ಪತ್ನಿ ಗಾಯತ್ರಿ (50) ಅವರನ್ನು ಸೈಟ್ ನೋಡಲೆಂದು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಸೈಟ್​ನಲ್ಲಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ನಂತರ ಗಾಯತ್ರಿ ಅಪಘಾತಕ್ಕೆ ಒಳಗಾಗಿದ್ದಾರೆ ಎಂಬಂತೆ ನಾಟಕವಾಡಿ ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಚಿಕ್ಕಜಾಲ ಟ್ರಾಫಿಕ್ ಸಬ್‌ ಇನ್ಸ್‌ಪೆಕ್ಟರ್ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆಗ ಅವರಿಗೆ ಇದು ಅಪಘಾತವಲ್ಲ ಎಂಬುದು ಅರಿವಿಗೆ ಬಂದಿದೆ. ಕೊಲೆ ಅನುಮಾನ ವ್ಯಕ್ತವಾಗಿದೆ. ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಗಾಯತ್ರಿಯ ಗಾಯಗಳ ಸ್ವರೂಪ ಪರಿಶೀಲಿಸಿದ ಬಳಿಕ ಪ್ರಕರಣ ಬಯಲಾಗಿದ್ದು, ತಕ್ಷಣ ಬಾಗಲೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ಎಂಬುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯಾದ ಅನಂತ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಪತ್ನಿಯ ಕೊಲೆ ಮಾಡಲು ಕಾರಣವೇನು ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

RELATED ARTICLES
- Advertisment -
Google search engine

Most Popular