ಧಾರವಾಡ : ಬಸಪ್ಪನ ದೇವಸ್ಥಾನದ ಎದುರೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಣಸಿಕಟ್ಚಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ರಾಮನಕೊಪ್ಪ ಗ್ರಾಮ ನಿವಾಸಿ ವಿಟ್ಠಲ್ ಕೂರಾಡಿ ಮೃತ ದುರ್ದೈವಿಯಾಗಿದ್ದು, ಇವರ ಸಂಬಂಧಿಕರೇ ಆರೋಪಿಗಳು ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಕಸ್ತೂರಿ ಜೊತೆ ವಿವಾಹವಾಗಿದ್ದ ವಿಟ್ಠಲ್, ಪೆಂಡಾಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ನಿತ್ಯವೂ ಕುಡಿದು ಬಂದು ಈತ ಜಗಳ ಮಾಡುತ್ತಿದ್ದ ಹಿನ್ನೆಲೆ ಪತ್ನಿ ಕಸ್ತೂರಿ ತವರುಮನೆಗೆ ಬಂದು ಹೆತ್ತವರ ಜೊತೆ ವಾಸವಿದ್ದರು. ಕಸ್ತೂರಿ ಮತ್ತು ವಿಟ್ಠಲ್ ದಂಪತಿಗೆ ಮೂವರು ಮಕ್ಕಳೂ ಇದ್ದು, ಮಾವನ ಮನೆಗೆ ಆಗಾಗ ವಿಟ್ಠಲ್ ಬಂದು ಹೋಗುತ್ತಿದ್ದರು. ಅದರಂತೆ ನಿನ್ನೆ ರಾತ್ರಿಯೂ ಮಾವನ ಮನೆಗೆ ಬಂದಿದ್ದರು. ಬಳಿಕ ದೇವಸ್ಥಾನದಲ್ಲಿ ಮಲಗಿದ್ದರು. ಆದರೆ ರಾತ್ರಿ ಬೆಳಗಾಗುವುದರ ಒಳಗೆ ವಿಟ್ಠಲ್ ಕೊಲೆಯಾಗಿದೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಲಘಟಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಜೊತೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಖಾಕಿ ಮುಂದಾದಾಗ ಕೊಲೆಯಾದ ವಿಟ್ಠಲ್ ಸಹೋದರ ಅಣ್ಣಪ್ಪ ಮತ್ತು ಕಸ್ತೂರಿ ಅವರ ಸಹೋದರ ಪುಂಡಲೀಕ ಎಂಬುದು ಬಹಿರಂಗವಾಗಿದೆ.

ಕಳ್ಳತನವನ್ನೂ ವಿಟ್ಠಲ್ ಮಾಡುತ್ತಿದ್ದರು ಎನ್ನಲಾಗಿದ್ದು, ಸ್ವತಃ ಸಹೋದರನ ಬೈಕ್ ಕದ್ದು ತಂದು ಅದಕ್ಕೆ ಬೆಂಕಿ ಹಚ್ಚಿದ್ದರಂತೆ. ಹೀಗಾಗಿ ಅಣ್ಣಪ್ಪ, ವಿಟ್ಠಲ್ ಮೇಲೆ ಸಿಟ್ಟಾಗಿದ್ದ. ಇನ್ನೊಂದು ಕಡೆ ಕುಡಿದು ಬಂದು ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಕಾರಣ ಪುಂಡಲೀಕ ಕೂಡ ಮುನಿಸಿಕೊಂಡಿದ್ದ. ಹೀಗಾಗಿ ಈ ಇಬ್ಬರು ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ವಿಟ್ಠಲ್ಗೆ ಸರಿಯಾಗಿ ಮದ್ಯ ಕುಡಿಸಿದ್ದ ಇವರು, ರಾತ್ರಿ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ವಿಟ್ಠಲ್ ಕೊಲೆ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೃತ್ಯದಲ್ಲಿ ಬೇರೆಯವರ ಪಾತ್ರವಿದೆಯಾ ಎನ್ನುವ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.



