Monday, December 29, 2025
Google search engine

Homeಅಪರಾಧರೈತ ಮಹಿಳೆಯ ಖಾತೆಗೆ ಜಮೆಯಾಗಿದ್ದ ಲಕ್ಷಾಂತರ ರೂಪಾಯಿ ಹಣಕ್ಕೆ ಸೈಬರ್ ವಂಚಕರು ಕನ್ನ

ರೈತ ಮಹಿಳೆಯ ಖಾತೆಗೆ ಜಮೆಯಾಗಿದ್ದ ಲಕ್ಷಾಂತರ ರೂಪಾಯಿ ಹಣಕ್ಕೆ ಸೈಬರ್ ವಂಚಕರು ಕನ್ನ

ರಾಯಚೂರು: ಖರೀದಿ ಕೇಂದ್ರದಲ್ಲಿ ಹತ್ತಿ ಮಾರಾಟ ಮಾಡಿದ ಬಳಿಕ ರೈತ ಮಹಿಳೆಯ ಖಾತೆಗೆ ಜಮೆಯಾಗಿದ್ದ ಲಕ್ಷಾಂತರ ರೂಪಾಯಿ ಹಣಕ್ಕೆ ಸೈಬರ್ ವಂಚಕರು ಕನ್ನ ಹಾಕಿದ್ದಾರೆ.

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಾಚನೂರು ಗ್ರಾಮದ ರೈತ ಮಹಿಳೆ ಜ್ಯೋತಿ ಅವರಿಗೆ ವಂಚನೆಯಾಗಿದೆ. 82 ಕ್ವಿಂಟಾಲ್ ಹತ್ತಿಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ಬಳಿಕ ಜ್ಯೋತಿಯವರ ಖಾತೆಗೆ ಸರ್ಕಾರದಿಂದ 6.69 ಲಕ್ಷ ರೂ. ಜಮೆಯಾಗಿತ್ತು. ಆದರೆ ಎರಡು ದಿನಗಳ ಬಳಿಕ ಖಾತೆಯಿಂದ ಹಣ ಮಾಯವಾಗಿದೆ. ಪರಿಶೀಲನೆ ಮಾಡಿದಾಗ ವಿವಿಧ ಏಳು ಖಾತೆಗಳಿಗೆ ಸಂಪೂರ್ಣ ಹಣ ವರ್ಗಾವಣೆಯಾಗಿರುವುದಾಗಿ ತಿಳಿದುಬಂದಿದೆ.

ಮಾನ್ವಿಯ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಮಹಿಳೆ ನೇರವಾಗಿ ಬ್ಯಾಂಕ್‌ಗೆ ಭೇಟಿ ನೀಡಿ ವಿವರ ಪಡೆದಿದ್ದಾರೆ. ಆದ್ರೆ ಬ್ಯಾಂಕ್‌ನಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಬ್ಯಾಂಕ್‌ನವರು ನಮ್ಮಿಂದ ಯಾವುದೇ ವರ್ಗಾವಣೆ ನಡೆದಿಲ್ಲ, ಇದು ಸೈಬರ್ ವಂಚಕರ ಕೈಚಳಕ ಅಂತ ತಿಳಿಸಿದ್ದಾರೆ. ನಾವು ಪೊಲೀಸರಿಗೆ ದೂರು ನೀಡಿ, ಪರಿಶೀಲನೆ ಮಾಡಿಸುತ್ತೇವೆ ಅಂತ ಭರವಸೆ ನೀಡಿದ್ದಾರೆ.

ಎರಡು ವರ್ಷದ ಪುಟ್ಟ ಕಂದಮ್ಮಳನ್ನು ಮನೆಯಲ್ಲಿ ಬಿಟ್ಟು, ಬಿಸಿಲಲ್ಲಿ ದುಡಿದ ಜ್ಯೋತಿ ಶರಣಬಸವ ದಂಪತಿ ಈಗ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಕ್ರೆಡಿಟ್ ಕಾರ್ಡ್‌ನಿಂದ ಹಣ ಕಟ್ ಆಗಿದೆ ಅಂತ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ರೈತ ಮಹಿಳೆಯ ಹೆಸರಿನಲ್ಲಿ ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲಾ. ಹೆಚ್ಚಾಗಿ ಮಳೆ ಖಾತೆಯನ್ನೂ ಬಳಸುವುದಿಲ್ಲ. ಒಂದೆರಡು ದಿನದಲ್ಲಿ ಬ್ಯಾಂಕ್‌ನಿಂದ ಹಣ ಪಡೆಯಲು ಯೋಚಿಸಿದ್ದ ದಂಪತಿ ಅನ್ಯಾಯವಾಗಿ ತಮ್ಮ ಹಣವನ್ನ ಕಳೆದುಕೊಂಡಿದ್ದಾರೆ. ಕೂಡಲೇ ಬ್ಯಾಂಕ್ ಅಧಿಕಾರಿಗಳು ತಮ್ಮ ಹಣವನ್ನ ಮರು ಪಾವತಿಸಬೇಕು ಅಂತ ಒತ್ತಾಯಿಸಿದ್ದಾರೆ. ಸರ್ಕಾರ ಸಹ ಇದರ ಬಗ್ಗೆ ಗಮನಹರಿಸಿ, ರೈತರ ಹಣವನ್ನ ಮರಳಿ ಕೊಡಿಸುವ ಕೆಲಸ ಮಾಡಬೇಕು, ಇಲ್ಲಾ ಸರ್ಕಾರವೇ ನಷ್ಟ ಭರಿಸಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

ಒಟ್ನಲ್ಲಿ, ಸಾಲ ಸೋಲ ಮಾಡಿ ರೈತರು ಬೆಳೆದಿದ್ದ ಬೆಳೆಯ ಹಣ ಸೈಬರ್ ವಂಚಕರ ಪಾಲಾಗಿದೆ. ರಾಯಚೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ಕೂಡಲೇ ರೈತರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕಿದೆ.

RELATED ARTICLES
- Advertisment -
Google search engine

Most Popular