Tuesday, December 30, 2025
Google search engine

Homeರಾಜ್ಯಹೊಸದಾಗಿ ಕೊಳಗೇರಿ ನಿರ್ಮಾಣಕ್ಕೆ ಮತ್ತು ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡುವುದಿಲ್ಲ : ಡಿಕೆ ಶಿವಕುಮಾರ್

ಹೊಸದಾಗಿ ಕೊಳಗೇರಿ ನಿರ್ಮಾಣಕ್ಕೆ ಮತ್ತು ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡುವುದಿಲ್ಲ : ಡಿಕೆ ಶಿವಕುಮಾರ್

ಬೆಂಗಳೂರು :  ಸರ್ಕಾರಿ ಭೂಮಿಯಲ್ಲಿ ನಿರ್ಮಾಣಗೊಂಡಿದ್ದ ಶೆಡ್‌ಗಳ ತೆರವು ಕಾರ್ಯಾಚರಣೆ ನಡೆಸಿದ ನಗರದ ಕೋಗಿಲು ಕ್ರಾಸ್‌ ಬಳಿಯ ಫಕೀರ್‌ ಕಾಲೋನಿ, ವಸೀಂ ಲೇಔಟ್‌ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದು, ಹೊಸದಾಗಿ ಕೊಳಗೇರಿ ನಿರ್ಮಾಣಕ್ಕೆ ಮತ್ತು ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಫಕೀರ್‌ ಕಾಲೋನಿ, ವಸೀಂ ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಶೆಡ್‌ ಮತ್ತು ಮನೆಗಳ ತೆರವು ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಒತ್ತುವರಿ ತೆರವು ಕಾರ್ಯಾಚರಣೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಧರ್ಮದ ಬಣ್ಣ ಬಳಿದ ನಂತರ ರಾಜ್ಯ ಸರ್ಕಾರ ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕ್ರಮದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ ಎಂದಿದ್ದಾರೆ.

ಕಳೆದೆರಡು ದಿನಗಳಿಂದ ಕರ್ನಾಟಕ ಮತ್ತು ಕೇರಳದ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆ ಕಳೆದುಕೊಂಡವರ ಜತೆ ಮಾತುಕತೆ ನಡೆಸಿದ್ದು, ಅದರಂತೆ ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೋಗಿಲು ಕ್ರಾಸ್‌ ಬಳಿಯ ಫಕೀರ್‌ ಕಾಲೋನಿ, ವಸೀಂ ಲೇಔಟ್‌ಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಅಕ್ರಮ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳನ್ನು ಡಿ.ಕೆ.ಶಿವಕುಮಾರ್‌ ತರಾಟೆಗೂ ತೆಗೆದುಕೊಂಡರಲ್ಲದೆ ಫಕೀರ್‌ ಕಾಲೋನಿ, ವಸೀಂ ಲೇಔಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಸೇರಿದ್ದ ಜಾಗವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಶೆಡ್‌ ಮತ್ತು ಮನೆ ಕಳೆದುಕೊಂಡಿರುವವರ ಅಹವಾಲು ಆಲಿಸಿ ಅದರಲ್ಲಿ ಬಹುತೇಕರು, ತಾವು 10 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಇಲ್ಲಿ ವಾಸಿಸುತ್ತಿದ್ದು, ಇಲ್ಲಿಂದ ಒಕ್ಕಲೆಬ್ಬಿಸಿದರೆ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದು, ಅದಕ್ಕೆ ಡಿ.ಕೆ.ಶಿವಕುಮಾರ್‌ ಅವರು, ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾರೆಲ್ಲ ಅರ್ಹರಿದ್ದಾರೋ, ವಸತಿ ಮತ್ತು ನಿವೇಶನ ವಂಚಿತರಾಗಿದ್ದಾರೋ ಅವರಿಗೆ ಬೇರೆ ವ್ಯವಸ್ಥೆ ಮಾಡುವ ಚಿಂತನೆಯಿಂದೆ ಎಂದು ಭರವಸೆ ನೀಡಿದ್ದಾರೆ.

ಜತೆಗೆ ನಿವಾಸಿಗಳ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿಗಳನ್ನು ಪಡೆದು ಪರಿಶೀಲನೆ ನಡೆಸಿದರು. ಕಳೆದ ಕೆಲ ದಿನಗಳ ಹಿಂದೆ ಜಿಬಿಎ ಅಧಿಕಾರಿಗಳು ಫಕೀರ್‌ ಕಾಲೋನಿ, ವಸೀಂ ಲೇಔಟ್‌ನಲ್ಲಿನ 188 ಮನೆಗಳನ್ನು ತೆರವು ಮಾಡಿದ್ದು, ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

ಅಲ್ಲದೆ, ತೆರವು ಕಾರ್ಯಾಚರಣೆ ನಂತರವೂ ಶೆಡ್‌ ಮತ್ತು ಮನೆ ಕಳೆದುಕೊಂಡವರು ಅಲ್ಲಿಯೇ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ವಾಸವಾಗಿದ್ದು, ಭಾನುವಾರವಷ್ಟೇ ವಸತಿ ಸಚಿವ ಜಮೀರ್‌ ಅಹಮದ್ ಖಾನ್‌ ಸ್ಥಳಕ್ಕೆ ಭೇಟಿ ನೀಡಿ ಅರ್ಹರಿಗೆ ಮನೆ ಕೊಡುತ್ತೇವೆ ಎಂದು ಘೋಷಿಸಿದ್ದಾರೆ.

ಇನ್ನೂ ಕೆಲವರು ನಿವಾಸಿಗಳಿಂದ ಒಂದು-ಒಂದೂವರೆ ಲಕ್ಷ ಹಣ ಪಡೆದು ಅಕ್ರಮವಾಗಿ ಗುಡಿಸಲು ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸರ್ಕಾರಿ ಜಾಗವನ್ನು ಅಕ್ರಮವಾಗಿ ಹಂಚಿರುವ ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವರು ರಾತ್ರೋರಾತ್ರಿ ಶೆಡ್‌, ಮನೆ ನಿರ್ಮಿಸಿಕೊಂಡಿದ್ದು, ಈ ಎಲ್ಲದರ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular