ಬೆಂಗಳೂರು : ಇತ್ತೀಚಿಗೆ ಭಾರಿ ಸುದ್ದಿಯಲ್ಲಿರುವ ಕೋಗಿಲು ಬಡಾವಣೆ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ಕೇರಳ ಸಿಎಂ ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ ಅಲ್ಲದೆ ಅಲ್ಪಸಂಖ್ಯಾತರ ಸಿಂಪತಿ ಪಡೆಯುವ ಕೆಲಸಕ್ಕಿಳಿದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಕಿದ್ದಾರೆ.
ಈ ಬಗ್ಗೆ ಕೋಗಿಲು ಬಳಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಸ್ಥಳ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘನತ್ಯಾಜ್ಯ ವಿಲೇವಾರಿಗಾಗಿ ನಿಗದಿ ಮಾಡಲಾಗಿದ್ದ ಜಾಗವನ್ನು ಒತ್ತುವರಿ ಮಾಡಿ ಶೆಡ್, ಮನೆಗಳನ್ನು ನಿರ್ಮಿಸಲಾಗಿತ್ತು.
ಸರ್ಕಾರಿ ಜಾಗವಾಗಿರುವ ಕಾರಣ ನಿವಾಸಿಗಳಿಗೆ ಆ ವಿಳಾಸಕ್ಕೆ ಮತದಾರರ ಗುರುತಿನ ಚೀಟಿ ನೀಡಿಲ್ಲ. ಅಕ್ಕಪಕ್ಕದ ಪ್ರದೇಶದ ವಿಳಾಸಕ್ಕೆ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ಅಲ್ಲದೆ, ಒತ್ತುವರಿ ತೆರವು ಮಾಡುವುದಕ್ಕೂ ಮುನ್ನ ಅಧಿಕಾರಿಗಳು ನಿವಾಸಿಗಳಿಗೆ ಮಾಹಿತಿ ನೀಡಿದರಲ್ಲದೆ, ಒತ್ತುವರಿ ಜಾಗವು ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು, ಸರ್ಕಾರಿ ಭೂಮಿ ಉಳಿಸಲು ತೆರವು ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇದೆಲ್ಲ ತಿಳಿಯದ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ಕಮ್ಯುನಿಸ್ಟ್ ಪಕ್ಷದವರು ಕೇರಳದಲ್ಲಿ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ವಿಚಾರವನ್ನು ದೊಡ್ಡದು ಮಾಡಿ ಅಲ್ಪಸಂಖ್ಯಾತರ ಸಿಂಪತಿ ಪಡೆಯಲು ಮುಂದಾಗಿದ್ದಾರೆ. ಅಲ್ಲದೆ ಕೇರಳ ಸಿಎಂ ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆಯಬೇಕು. ಇದು ನಮ್ಮ ರಾಜ್ಯದ ಸ್ಥಳೀಯ ವಿಚಾರ. ನಾನು ಇಲ್ಲಿಗೆ ಬಂದಾಗ ಅಲ್ಪಸಂಖ್ಯಾತ ಸಮುದಾಯದವರು ನಮಗೆ ಜೈಕಾರ ಹಾಕುತ್ತಿದ್ದರು. ನಾವು ತಪ್ಪು ಮಾಡಿದ್ದರೆ ಧಿಕ್ಕಾರ ಕೂಗುತ್ತಿದ್ದರು ಎಂದು ಹೇಳಿದರು.



