ಬೆಂಗಳೂರು : ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದವರಿದ್ದರೆ ಮಾತ್ರ ಮನೆ ಕೊಡುತ್ತೇವೆ. ಹೊರಗಿನಿಂದ ಬಂದವರಿಗೆ ನಾವು ಮನೆ ಕೊಡಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.
ಈ ವೇಳೆ ಕೋಗಿಲು ಲೇಔಟ್ ಅಕ್ರಮ ಮನೆ ತೆರವು ವಿಚಾರಕ್ಕೆ ಪಾಕಿಸ್ತಾನ ಎಂಟ್ರಿಗ ಕೊಟ್ಟಿರುವುದಕ್ಕೆ ಸಚಿವ ಜಮೀರ್ ಕಿಡಿಕಾರಿದ್ದು, ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಏನು ಸಂಬಂಧ? ಪಾಕಿಸ್ತಾನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಬಗ್ಗೆ ಹೇಳೋಕೆ ಅವರು ಯಾರು? ನಮ್ಮ ದೇಶದಲ್ಲಿ ನಾವು ಇದ್ದೇವೆ. ಮುಸ್ಲಿಮರನ್ನು ನೋಡಿಕೊಳ್ಳೋಕೆ, ಮೊದಲು ಪಾಕಿಸ್ತಾನ ಅವರು ಅವರ ದೇಶ ನೋಡಿಕೊಳ್ಳಲಿ. ಪಾಕಿಸ್ತಾನದಲ್ಲಿ ಬಡತನ ಇದೆ. ಮೊದಲು ಅದನ್ನ ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಕ್ರಮ ಮನೆಗಳನ್ನು ಸಕ್ರಮ ಮಾಡ್ತಿರೋ ವಿಚಾರ ಕುರಿತು ಮಾತನಾಡಿದ ಅವರು, ನಾಳೆ ನಾನು ಸುದ್ದಿಗೋಷ್ಠಿ ಮಾಡಿ ಸಂಪೂರ್ಣ ಮಾಹಿತಿ ಕೊಡುತ್ತೀನಿ. ಡಾಕ್ಯುಮೆಂಟ್ ಪರಿಶೀಲನೆ ಮಾಡಿ ಅಂತ ಸಿಎಂ, ಡಿಸಿಎಂ ಅವರು ಸೂಚನೆ ನೀಡಿದ್ದಾರೆ. ನಮ್ಮ ಕರ್ನಾಟಕದವರು ಇದ್ದರೆ ಮಾತ್ರ ಮನೆ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಆಚೆಯಿಂದ ಬಂದವರಿಗೆ ನಾವು ಮನೆ ಕೊಡೊಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ವೇಣುಗೋಪಾಲ್ ಅವರ ಹಸ್ತಕ್ಷೇಪ ಏನೂ ಇಲ್ಲ. ವೇಣುಗೋಪಾಲ್ ಅವರು ಟಿವಿಯಲ್ಲಿ ಹೀಗೆ ಬಂದಿದೆ ನೋಡಿ ಅಂತ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ನಮ್ಮದು ರಾಷ್ಟ್ರೀಯ ಪಕ್ಷ. ಅವರು ನಮ್ಮ ನಾಯಕರು. ಕರ್ನಾಟಕದಲ್ಲಿ ಹೀಗೆ ಸುದ್ದಿ ನಡೆಯುತ್ತಿದೆ ಅಂತ ಹೇಳಿದ್ದಾರೆ. ಸಿಎಂ ನೋಡಿದ್ದಾರೆ ಅಷ್ಟೆ. ಸಿಎಂ ಅವರು ಮೀಟಿಂಗ್ ಮಾಡಿ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ದಾಖಲಾತಿ ನೋಡಿ ಯಾರಿಗೂ ಅನ್ಯಾಯವಾಗಬಾರದು. ಸ್ಥಳೀಯರಿಗೆ ಮಾತ್ರ ಮನೆ ಕೊಡಿ ಅಂತ ತೀರ್ಮಾನ ಆಗಿದೆ. ಆಧಾರ್, ರೇಷನ್ ಕಾರ್ಡ್, BPL ಕಾರ್ಡ್ ಇದ್ದವರಿಗೆ ಮಾತ್ರ ಮನೆ ಕೊಡ್ತೀವಿ. ಅದು ಬಿಟ್ಟು ಬೇರೆ ಅವರಿಗೆ ಕೊಡಲು ಸಾಧ್ಯವಿಲ್ಲ.
ಅಧಿಕೃತ ದಾಖಲಾತಿ ಇದ್ದರೆ ಮಾತ್ರ ಮನೆಗಳನ್ನು ಕೊಡಲು ಸಾಧ್ಯ. ಬಾಂಗ್ಲಾದೇಶದಿಂದ ಬಂದೋರಿಗೆ ಮನೆ ಕೊಡಲು ಸಾಧ್ಯವಿಲ್ಲ. ನನಗೆ ಇರೋ ಮಾಹಿತಿ ಪ್ರಕಾರ ಬಾಂಗ್ಲಾದೇಶದವರು ಯಾರು ಇಲ್ಲ. 185 ಜನರಲ್ಲಿ 20 ಜನ ಬೇರೆ ಜಿಲ್ಲೆಯವರು ಇದ್ದಾರೆ. ಅವರು ಕರ್ನಾಟಕದವರೇ. ಯಾದಗಿರಿ, ಕಲಬುರಗಿ, ಬೀದರ್ ಅವರೇ. ಜಿಬಿಎ ಅಧಿಕಾರಿಗಳು ಪಟ್ಟಿ ರೆಡಿ ಮಾಡೋಕೆ ಸಿಎಂ, ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಅವರು ಪಟ್ಟಿ ರೆಡಿ ಮಾಡುತ್ತಾರೆ ಎಂದರು.
ನಾವು ಯಾರ ಟ್ರ‍್ಯಾಪ್‌ಗೂ ಬೀಳೊಲ್ಲ. ಕೇರಳ ನಿಯೋಗ ಬಂದಿತ್ತು. ಅವರು ಏನು ಮಾಡಿದ್ರು? ಯುಪಿಯಲ್ಲೂ ಬುಲ್ಡೋಜ್ ಆಗಿತ್ತು. ಯಾಕೆ ಅಲ್ಲಿಗೆ ಹೋಗಲಿಲ್ಲ ಅವರು. ಮುಂದಿನ ವರ್ಷ ಚುನಾವಣೆ ಇದೆ. ಇದಕ್ಕಾಗಿ ರಾಜಕೀಯ ಮಾಡೊದಕ್ಕೆ ಬಂದಿರೋದು.
ಕೇರಳದವರು ಬಂದರು ಏನು ಘೋಷಣೆ ಮಾಡಲಿಲ್ಲ. ಅವರ ಸರ್ಕಾರ, ಪಾರ್ಟಿ ಮನೆ ಕಟ್ಟುಕೊಡ್ತೀನಿ ಅಂತ ಹೇಳಲಿಲ್ಲ. ಕೇರಳದಲ್ಲಿ ಪ್ರವಾಹದಿಂದ ಮನೆ ಹಾಳಾದಾಗ ಕರ್ನಾಟಕ ಸರ್ಕಾರ 100 ಮನೆ ಕಟ್ಟಿ ಕೊಡ್ತಾ ಇದ್ದೇವೆ ಎಂದು ತಿಳಿಸಿದರು.



