Tuesday, December 30, 2025
Google search engine

Homeರಾಜಕೀಯಸಂಪುಟ ಪುನಾರಚನೆ ಚರ್ಚೆಗೆ ವೇಗ : ʼಹೈʼ ಬಳಿ ಗ್ರೀನ್ ಸಿಗ್ನಲ್ ಪಡೆಯಲು ಸಿಎಂ ಸಿದ್ದರಾಮಯ್ಯ...

ಸಂಪುಟ ಪುನಾರಚನೆ ಚರ್ಚೆಗೆ ವೇಗ : ʼಹೈʼ ಬಳಿ ಗ್ರೀನ್ ಸಿಗ್ನಲ್ ಪಡೆಯಲು ಸಿಎಂ ಸಿದ್ದರಾಮಯ್ಯ ಪ್ರಯತ್ನ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಸಂಪುಟ ಪುನಾರಚನೆ ಚರ್ಚೆ ವೇಗ ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿ ಕುರ್ಚಿ ಗಟ್ಟಿ ಎಂಬ ಭರವಸೆ ಸಿಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಸದ್ದಿಲ್ಲದೆ ಸಂಪುಟ ಪುನಾರಚನೆ ಸಿದ್ದತೆ ನಡೆಸುತ್ತಿದ್ದಾರೆ. ಈ ವೇಳೆ ಯಾರನ್ನೇ ಆದರೂ ಸಂಪುಟದಿಂದ ಕೈಬಿಟ್ಟರೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಅಲ್ಲದೆ, ಹೈಕಮಾಂಡ್ ಬಳಿ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಪಡೆಯಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸುತ್ತಿದ್ದು, ಕಳೆದ ಕೆಲ ತಿಂಗಳ ಹಿಂದೆಯೇ ಸಂಪುಟ ಪುನಾರಚನೆಗೆ ಅನುಮತಿ ನೀಡುವಂತೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಮನವಿ ಮಾಡಿದ್ದರು. ಸಿಎಂ ಹಾಗೂ ಡಿಸಿಎಂ ನಡುವಿನ ನಾಯಕತ್ವ ಗೊಂದಲದ ಕಾರಣ ಸ್ಪಷ್ಟವಾಗಿ ಏನನ್ನೂ ತಿಳಿಸದೆ ಹೈಕಮಾಂಡ್ ತಟಸ್ಥವಾಗಿದೆ.

ಇತ್ತೀಚೆಗೆ ಸಂಪುಟ ಪುನಾರಚನೆ ಪ್ರಸ್ತಾಪಕ್ಕೆ ಸಿದ್ಧತೆ ಮಾಡಿಕೊಂಡು ದೆಹಲಿಗೆ ಸಿದ್ದರಾಮಯ್ಯ ತೆರಳಿದ್ದರು. ಕೆ.ಜೆ ಜಾರ್ಜ್ ಆದಿಯಾಗಿ ಹಿರಿಯ ಸಚಿವರ ದಂಡಿನೊಂದಿಗೆ ದೆಹಲಿಗೆ ತೆರಳಿದ್ದರು. ಎಐಸಿಸಿ ಕಾರ್ಯಕಾರಿಣಿ ಸಭೆ ಬಳಿಕ ರಾಹುಲ್ ಗಾಂಧಿ ಮುಂದೆ ಸಂಪುಟ ಪುನಾರಚನೆ ಪ್ರಸ್ತಾಪಕ್ಕೆ ಮುಂದಾಗಿದ್ದರು. ಆದರೆ ಕಾರ್ಯಕಾರಿಣಿಗಷ್ಟೇ ಸೀಮಿತವಾದ ಕಾರಣ ರಾಹುಲ್ ಜೊತೆ ಹೆಚ್ಚು ಮಾತನ್ನಾಡಲಾಗದೆ ವಾಪಸ್ಸಾಗಿದ್ದರು.

ಇದೀಗ ಮತ್ತೆ ಜನವರಿ ಎರಡನೇ ವಾರದಲ್ಲಿ ದೆಹಲಿಗೆ ತೆರಳಲಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಂದೆ ಮತ್ತೆ ಸಂಪುಟ ಪುನಾರಚನೆ ವಿಚಾರ ಪ್ರಸ್ತಾಪಿಸಿ ಗ್ರೀನ್ ಸಿಗ್ನಲ್ ಪಡೆದುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಈ ಬಗ್ಗೆ ಹಲವು ಸಚಿವರ ಜೊತೆ ಚರ್ಚೆಯನ್ನೂ ನಡೆಸಿರುವ ಸಿಎಂ ಸಿದ್ದರಾಮಯ್ಯ, ಸಂಪುಟಕ್ಕೆ ಸರ್ಜರಿ ನಡೆಯಲಿದೆ, ಆಗ ಯಾರನ್ನು ಬೇಕಾದರೂ ಕೈ ಬಿಟ್ಟು ಹೊಸಬರನ್ನು ತೆಗೆದುಕೊಳ್ಳಬಹುದು. ಇದಕ್ಕೆ ನೀವರಲ್ಲರೂ ಸಿದ್ಧರಾಗಿರಬೇಕು, ಜೊತೆಗೆ ಸಹಕರಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.

ಸಂಪುಟ ಪುನಾರಚನೆ ವಿಚಾರವಾಗಿ ಆಕಾಂಕ್ಷಿಗಳಲ್ಲಿ ಸಾಕಷ್ಟು ನಿರೀಕ್ಷೆಗಳು ಇವೆ. ಈಗಾಗಲೇ ಲಾಬಿ ತೀವ್ರಗೊಂಡಿದೆ. ನಾಯಕತ್ವ ಬಿಕ್ಕಟ್ಟಿನ ನಡುವೆ ಸಂಪುಟ ಪುನಾರಚನೆಗೆ ಅವಕಾಶ ನೀಡದೆ ಇದ್ದರೆ ಆಂತರಿಕವಾಗಿ ಮತ್ತಷ್ಟು ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದೆ.

ಹೀಗಾಗಿ ದೆಹಲಿಗೆ ಜನವರಿಯಲ್ಲಿ ಸಿಎಂ ಸಿದ್ದರಾಮಯ್ಯ ತೆರಳುವ ಸಂದರ್ಭದಲ್ಲಿ ಸಂಪುಟ ಪುನಾರಚನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಸಾಧ್ಯತೆ ಇದೆ. ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಹೊಸ ವರ್ಷಕ್ಕೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಪಕ್ಕಾ ಎಂಬುದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular