ಕೊಪ್ಪಳ: ಹೆಣ್ಣು ಮಕ್ಕಳು ಬೇಡ ಎನ್ನುವ ಕ್ರೂರ ಮನಸ್ಥಿತಿ ಇನ್ನೂ ಹೋಗಿಲ್ಲ. ಹೆಣ್ಣು ಮಗು ಎಂಬ ಕಾರಣಕ್ಕೆ ಬೀದಿಯಲ್ಲಿ ಬಿಟ್ಟು ಹೋಗುವ ಘಟನೆಗಳು ಇಂದಿಗೂ ಕಂಡು ಬರುತ್ತಿದೆ ಎಂಬುದು ಅಚ್ಚರಿಯ ವಿಚಾರ, ಸಮಾಜ ಬದಲಾದರೂ, ಮನುಷ್ಯನ ಮನಸ್ಥಿತಿ ಬದಲಾಗುತ್ತಿಲ್ಲ. ಇದೀಗ ಕೊಪ್ಪಳದ ತಾಲೂಕಿನ ಐತಿಹಾಸಿಕ ಹುಲಗೆಮ್ಮ ದೇವಸ್ಥಾನದಲ್ಲೂ ಇಂತಹ ಅಮಾನವೀಯ ಘಟನೆಯೊಂದು ನಡೆದಿದೆ. ಈ ದೇವಸ್ಥಾನಕ್ಕೆ ಲಕ್ಷ ಲಕ್ಷ ಭಕ್ತರು ರಾಜ್ಯದಿಂದ ಹಾಗೂ ಹೊರರಾಜ್ಯದಿಂದಲೂ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಇಂತಹ ಶ್ರದ್ಧಾ ಕೇಂದ್ರದಲ್ಲಿ ಈ ಘಟನೆ ನಡೆದಿರುವುದು, ಮನುಷ್ಯ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ದೇವಾಲಯದ ಪಕ್ಕದಲ್ಲಿರುವ ಮುಳ್ಳಿನ ಪೊದೆಯಲ್ಲಿ ನವಜಾತ ಶಿಶುವನ್ನು ಎಸೆದು ಹೋಗಿದ್ದಾರೆ.
ಹೆಣ್ಣು ಮಗು ಎಂಬ ಕಾರಣಕ್ಕೆ ದೇವಾಲಯದ ಪಕ್ಕದಲ್ಲಿ ಮಗುವನ್ನು ಎಸೆದು ಹೋಗಿದ್ದಾರೆ ಎಂದು ಅಲ್ಲಿನ ಜನ ಹೇಳಿದ್ದಾರೆ. ಈ ಮಗು ಜನಿಸಿ ಒಂದು ದಿನ ಆಗಿರಬಹುದು ಎಂದು ಹೇಳಲಾಗಿದೆ. ಮಗು ಅಳುತ್ತಿರುವುದು ಕೇಳಿ ದೇವಸ್ಥಾನದ ಹೋಮ್ ಗಾರ್ಡ್ಗಳು ಸ್ಥಳಕ್ಕೆ ಬಂದು ನೋಡಿದ್ದಾರೆ. ತಕ್ಷಣ ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಅಮ್ಮನ ಎದೆಹಾಲು ಇಲ್ಲದೆ ಹಸಿವಿನಿಂದ ಮಗು ಒದ್ದಾಡಿದೆ. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಇನ್ನು ಈ ಮಗುವಿನ ಪೋಷಕರು ಯಾರು ಎಂಬ ಕಾರ್ಯಚರಣೆ ನಡೆಯುತ್ತಿದೆ. ಮದುವೆಗೂ ಮುನ್ನವೇ ಗರ್ಭಿಣಿಯಾಗಿ, ಮಗುವನ್ನು ಪಡೆದಿರುವ ಕಾರಣಕ್ಕೆ ಮಗುವನ್ನು ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ದೇವಸ್ಥಾನದ ಪಕ್ಕದಲ್ಲಿರುವ ಮುಳ್ಳಿನ ಪೊದೆಯಲ್ಲಿ ಎಸೆದು ಹೋಗಿರುವ ಕಾರಣ, ಮಗುವಿನ ಮೇಲೆ ಹುಳುಗಳು ಮೆತ್ತಿಕೊಂಡು ನೋವಿನಿಂದ ಮಗು ಕೂಗುತ್ತಿತ್ತು. ಇದನ್ನು ಗಮನಿಸಿದ ಹುಲಗೆಮ್ಮ ದೇವಸ್ಥಾನದಲ್ಲಿ ಕೆಲಸ ಮಾಡತಿದ್ದ,ಹೋಮ್ ಗಾರ್ಡ್ ಗಳು ಮಗುವಿನ ರಕ್ಷಣೆ ಮಾಡಿ, ಹುಲಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದಾರೆ. ಇದೀಗ ಮಗು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿದೆ. ಮಗುವ ಆರೋಗ್ಯವಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸುಮಾರು 2 ಕೆಜಿ 400 ಗ್ರಾಂ ಇದೆ. ಹುಲಗಿಯಲ್ಲಿ ಕೆಲಸ ಮಾಡತಿದ್ದ ಹೋಮ್ ಗಾರ್ಡ್ ಗಳಾದ ಶಿವಕುಮಾರ್ ಹಾಗೂ ಮಾರುತಿ ಅವರ ಸಮಯ ಪ್ರಜ್ಜೆಯಿಂದ ನವಜಾತ ಶಿಶು ಬದುಕಿದೆ. ಮಗುವಿಗೆ ಮುಳ್ಳು ಚುಚ್ಚಿಕೊಂಡಿದ್ದು, ಹಾಗೂ ಹುಳುಗಳು ಕಚ್ಚಿರುವುದರಿಂದ ನಂಜಾಗಿರುವ ಸಾಧ್ಯತೆಗಳು ಇದೆ ಎಂದು ವೈದ್ಯ ಗೀರಿಶ್ ಹೇಳಿದ್ದಾರೆ. ಮಕ್ಕಳಾ ರಕ್ಷಣಾ ಘಟಕದ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿದ್ದು, ಮಗುವಿನ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಗುವಿನ ಪೋಷಕರ ಬಗ್ಗೆಯೂ ಕಾರ್ಯಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಮಗುವಿನ ಪೋಷಕರು ಸಿಕ್ಕಿಲ್ಲ ಎಂದರೆ ಮಗುವನ್ನು ದತ್ತು ನೀಡುವ ಪ್ರತಿಕ್ರಿಯೆ ನಡೆಸುತ್ತೇವೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹೇಳಿದ್ದಾರೆ.



