ಬೆಂಗಳೂರು : ನಗರದ ಉತ್ತರ ಭಾಗದ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡರ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯ ಕೋಗಿಲು ಬಡಾವಣೆಯ ಅಕ್ರಮ ಒತ್ತುವರಿ ವಿಚಾರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದು, ಬಿಜೆಪಿ ಮತ್ತು ಜೆಡಿಎಸ್, ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ತುರ್ತು ಸಭೆಯನ್ನು ನಡೆಸಿದ್ದು, ಈ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹರಿಗೆ ಜ.1 ರಂದು ಮನೆಯನ್ನು ವಿತರಿಸಲಾಗುವುದು ಎಂದು ಹೇಳಿದ್ದರು. ಜೊತೆಗೆ, ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡುವುದು ಈ ಪ್ರಕರಣಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿದ್ದರು.

ಇನ್ನೂ ಮುಖ್ಯಮಂತ್ರಿಗಳ ಹೇಳಿಕೆಗೆ ಜೆಡಿಎಸ್ ಪ್ರತಿಕ್ರಿಯಿಸಿದ್ದು, ಇದೊಂದು ಪ್ರಕರಣಕ್ಕೆ ಮಾತ್ರ ಸೀಮಿತ ಎಂದು ತಿಪ್ಪೇಸಾರುವ ಕೇರಳಿಗರ ಚೇಟಾ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ ಕಸ ವಿಲೇವಾರಿ ಮಾಡುವ ಉದ್ದೇಶಕ್ಕೆ 15 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದರು. ಬಂಡೆ ಕ್ವಾರಿ ಕೂಡ ಅಲ್ಲಿದೆ. ಪಾಲಿಕೆಯವರು ಕಸ ಹಾಕುತ್ತಿದ್ದು, ಭೂಮಿ ಅವರ ಸ್ವಾಧೀನದಲ್ಲೇ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಹೇಳಿಕೆಗೆ ಜೆಡಿಎಸ್ ಟ್ವೀಟ್ ಮಾಡಿದ್ದು ಹೀಗೆ, ವಸತಿ ರಹಿತ ಕನ್ನಡಿಗರಿಗೆ ಮಿಡಿಯದ ಮಾನವೀಯತೆ, ಕೇರಳದ ಅಕ್ರಮ ವಲಸಿಗರಿಗೆ ಮಿಡಿಯುತ್ತಿರುವ ಇಬ್ಬಗೆ ನೀತಿಗೆ ಧಿಕ್ಕಾರವಿರಲಿ. ಹೈಕಮಾಂಡ್ ಆರ್ಡರ್ ಅನ್ನು ತಲೆಬಾಗಿ, ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿ ಅಕ್ರಮ ವಲಸಿಗರ ಪರವಾಗಿ, ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಆದೇಶ ಹೊರಡಿಸಿ, ವಸತಿ ರಹಿತ ಕನ್ನಡಿಗರಿಗೆ ಬಗೆದ ವಿಶ್ವಾಸದ್ರೋಹವಲ್ಲವೇ?
ಮುಂದುವರಿಯುತ್ತಾ, ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಸತಿರಹಿತ ಬಡ ಕನ್ನಡಿಗರಿಗೆ ಸೂರಿಲ್ಲ. ವಸತಿ ಇಲಾಖೆಯ ಮನೆ ಹಂಚಿಕೆಗಾಗಿ ಅರ್ಜಿ ಸಲ್ಲಿಸಿ ಲಕ್ಷಾಂತರ ಜನರು ಹಗಲು ರಾತ್ರಿ ದುಡಿದ ಹಣವನ್ನು ಮುಂಗಡ ಕಟ್ಟಿ, ವರ್ಷಾನುಗಟ್ಟಲೇ ಇನ್ನೂ ಕಾಯುತ್ತಿದ್ದಾರೆ. ಇಂತಹ ನಿರ್ಗತಿಕರಿಗೆ ಮನೆಗಳನ್ನು ನೀಡುವ ಮನಸ್ಸು @INCKarnataka ಸರ್ಕಾರಕ್ಕೆ ಇಲ್ಲವಾಗಿದೆ ಎಂದಿದ್ದಾರೆ.
ಅಲ್ಲದೆ ವೋಟ್ ಬ್ಯಾಂಕ್‌ಗಾಗಿ ಒಂದು ಸಮುದಾಯದ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕನ್ನಡಿಗರ ತೆರಿಗೆ ಹಣದಲ್ಲಿ ವಲಸಿಗರಿಗೆ 11.20 ಲಕ್ಷ ರೂ ವೆಚ್ಚದ ಮನೆಗಳನ್ನು ನೀಡಿ, ರಾಜ ಮಾರ್ಯಾದೆ ಕೊಡುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ವಂಚನೆ ಎಂದು ಜೆಡಿಎಸ್ ಟ್ವೀಟ್ (ಎಕ್ಸ್) ನಲ್ಲಿ ಖಾರವಾಗಿ ಪ್ರಶ್ನಿಸಿದೆ.
ಕೋಗಿಲು ಬಡಾವಣೆಯಲ್ಲಿ ಡಿಸೆಂಬರ್ 20ರಂದು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ಗಳನ್ನು ನಿರ್ಮಾಣ ಮಾಡಿದ್ದ ಸುಮಾರು 167 ಶೆಡ್‌ಗಳನ್ನು ತೆರವುಗೊಳಿಸಲಾಗಿತ್ತು. ಅವರೆಲ್ಲರಿಗೂ ನೋಟಿಸ್ ನೀಡಿ, ಸರ್ಕಾರದ ಜಾಗವಾಗಿದ್ದು ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು, ಆದರೂ ಅವರು ಖಾಲಿ ಮಾಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನುಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಒಂದು ವೇಳೆ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.



