ಸದ್ಯ ಭಾರಿ ಸುದ್ದಿಯಲ್ಲಿರುವ ಕೋಗಿಲು ವಿವಾದವು, ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳು, ಶೆಡ್ಗಳ ತೆರವು ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಬುಲ್ಡೋಜರ್ ನೀತಿ ಎಂದು ತೀವ್ರ ಟೀಕೆ ಮಾಡಿದ್ದರು. ಆದರೆ ಕೇರಳ ಸಿಎಂ ವಾಸ್ತವಾಂಶ ಅರಿಯದೆ ಸುಮ್ಮನೆ ಟೀಕೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಕೆಲವು ಸಚಿವರು ವಾಗ್ದಾಳಿ ನಡೆಸಿದ್ದರು.
ಇನ್ನೂ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಕೋಗಿಲು ನಿರಾಶ್ರಿತರಿಗೆ ತಕ್ಷಣವೇ ಮನೆಗಳನ್ನು ನೀಡಲು ಸರ್ಕಾರ ಮುಂದಾಗಿದ್ದು, ಹೊಸ ವರ್ಷಕ್ಕೆ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಸಿಎಂ ಸಿದ್ದರಾಮಯ್ಯನವರೇ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಕೇರಳ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತಿರುವನಂತಪುರದಲ್ಲಿ ಭೇಟಿಯಾಗಿದ್ದು, ಇಂದು ಕೇರಳದ ವರ್ಕಳದಲ್ಲಿ ಶಿವಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ರಾಜಧಾನಿ ತಿರುವನಂತಪುರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಕೇರಳ ಸಿಎಂ ಪಿಣರಾಯಿ ವಿಜಯನ್ರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ.
ನಂತರ ಕೇರಳದ ಶಿವಗಿರಿ ಮಠಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಠಾಧೀಶರಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ ಉಪಸ್ಥಿತರಿದ್ದರು. ಈ ವೇಳೆ ವೇದಿಕೆಯಲ್ಲಿ ಪಿಣರಾಯಿ ವಿಜಯನ್, ಸಿದ್ದರಾಮಯ್ಯ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.
ಕೇರಳದ ವರ್ಕಳದಲ್ಲಿ ನಡೆಯಲಿರುವ ಶಿವಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಬ್ರಹ್ಮಶ್ರೀ ಜ್ಞಾನತೀರ್ಥ ಸ್ವಾಮೀಜಿಯವರು ಹಾಗೂ ಗುರುಗಳ ಅನುಯಾಯಿಗಳಿಂದ ದೊರೆತ ಆತ್ಮೀಯ ಸ್ವಾಗತದಿಂದ ಹರ್ಷಿತನಾದೆ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ವೇಳೆ ಒಂದು ಕಾಲದಲ್ಲಿ ಜಾತಿಯಾಧಾರಿತ ಶೋಷಣೆ, ಅಸಮಾನತೆಗಳಿಂದ ನರಳುತ್ತಿದ್ದ ಕೇರಳದಲ್ಲಿ ಸಮಾನತೆಯ ಬೆಳಕು ಹರಿಸಿದ ನಾರಾಯಣ ಗುರುಗಳು ನಡೆದಾಡಿದ ನೆಲದಲ್ಲಿ ಜರುಗಲಿರುವ ಯಾತ್ರಾರ್ಥಿಗಳ ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಾನು ಕಾತುರನಾಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.



