Thursday, January 1, 2026
Google search engine

Homeರಾಜ್ಯಅಕ್ರಮ ವಲಸಿಗರಿಗೆ ಪರ್ಯಾಯ ವಸತಿ ನೀಡುವುದಿಲ್ಲ, ತಕ್ಷಣವೇ ಗಡಿಪಾರು : ಜಿ.ಪರಮೇಶ್ವರ್

ಅಕ್ರಮ ವಲಸಿಗರಿಗೆ ಪರ್ಯಾಯ ವಸತಿ ನೀಡುವುದಿಲ್ಲ, ತಕ್ಷಣವೇ ಗಡಿಪಾರು : ಜಿ.ಪರಮೇಶ್ವರ್

ಬೆಂಗಳೂರು: ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್‌ ಫಕೀರ್‌ ಬಡಾವಣೆಯಲ್ಲಿ ಇತ್ತೀಚಿಗೆ ನಡೆದ ತೆರವು ಕಾರ್ಯಚರಣೆಯ ಬೆನ್ನಲ್ಲೇ, ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಈ ಕುರಿತು ಸ್ಪಷ್ಟನೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಒಂದು ವೇಳೆ ಪೊಲೀಸ್ ತಪಾಸಣೆಯಲ್ಲಿ ಅಕ್ರಮ ಬಾಂಗ್ಲಾದೇಶಿಗರು ಪತ್ತೆಯಾದಲ್ಲಿ ಅವರಿಗೆ ಯಾವುದೇ ಪರ್ಯಾಯ ವಸತಿ ಸೌಲಭ್ಯ ನೀಡುವುದಿಲ್ಲ ಮತ್ತು ತಕ್ಷಣವೇ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರ ಪಟ್ಟಿಯನ್ನು ಬೃಹತ್ ಬೆಂಗಳೂರು ಪ್ರಾಧಿಕಾರ ಸಿದ್ಧಪಡಿಸುತ್ತಿದ್ದು, ಈ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಹಿನ್ನೆಲೆ, ಮೂಲ ಸ್ಥಳ ಮತ್ತು ಬೆಂಗಳೂರಿನಲ್ಲಿ ಅವರು ವಾಸಿಸುತ್ತಿರುವ ಅವಧಿಯನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ತಪಾಸಣೆಯ ವೇಳೆ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳು ಪತ್ತೆಯಾದಲ್ಲಿ, ಅವರನ್ನು ತಕ್ಷಣವೇ ವಶಕ್ಕೆ ಪಡೆದು ನಿಯಮಾನುಸಾರ ಅವರ ದೇಶಕ್ಕೆ ಗಡಿಪಾರು ಮಾಡಲಾಗುವುದು ಹಾಗೂ ಅಂತಹ ವಿದೇಶಿ ಪ್ರಜೆಗಳಿಗೆ ಸರ್ಕಾರದ ವತಿಯಿಂದ ಯಾವುದೇ ಪರ್ಯಾಯ ಸೌಲಭ್ಯ ಅಥವಾ ವಸತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ಈ ವಲಸಿಗರು ಯಾವುದಾದರೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ಅಂತಹವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.‌

ಈ ಸಂದರ್ಭದಲ್ಲಿ ಕೋಗಿಲು ಲೇಔಟ್ ನಿರಾಶ್ರಿತರು ಅಕ್ರಮ ಬಾಂಗ್ಲಾದೇಶಿಗರು ಎಂದು ಆರೋಪಿಸಿದ್ದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಮಾಜಿ ಗೃಹ ಸಚಿವರಾಗಿ ಕಾನೂನು ಪ್ರಕ್ರಿಯೆ ತಿಳಿದಿರುವ ಅಶೋಕ್ ಅವರು ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರಲ್ಲದೆ ಅಕ್ರಮ ವಲಸಿಗರ ಪತ್ತೆ ಕಾರ್ಯ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ, ರಾಜ್ಯಾದ್ಯಂತ ನಡೆಯುತ್ತಿದೆ ಎಂದು ತಿಳಿಸಿದರು.

ಅಲ್ಲದೆ ವಿಶೇಷವಾಗಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿನ್ನೆಲೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಮಾಲೀಕರಿಗೆ ಸೂಚಿಸಲಾಗಿದ್ದು, ಪೊಲೀಸ್ ತಂಡಗಳು ಕಾಲಕಾಲಕ್ಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ.

ಈ ನಡುವೆ ಲೇಔಟ್‌ಗೆ ಭೇಟಿ ನೀಡಿದ ನಂತರ ಮಾತನಾಡಿದ ಆರ್‌.ಅಶೋಕ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ತುಷ್ಟೀಕರಣ ರಾಜಕಾರಣಕ್ಕಾಗಿ ಕರ್ನಾಟಕದಲ್ಲಿ ಮಿನಿ ಬಾಂಗ್ಲಾದೇಶ ನಿರ್ಮಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಕೋಗಿಲು ಲೇಔಟ್ ಪ್ರದೇಶದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಗೂಗಲ್ ಮ್ಯಾಪ್ ಪುರಾವೆಗಳ ಪ್ರಕಾರ ಒಂದು ವರ್ಷದ ಹಿಂದೆ ಈ ಪ್ರದೇಶದಲ್ಲಿ ಯಾವುದೇ ಮನೆಗಳಿರಲಿಲ್ಲ ಮತ್ತು ಕೇವಲ ಕಳೆದ ಆರು ತಿಂಗಳ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವಸಾಹತುಗಳು ಹೇಗೆ ನಿರ್ಮಾಣವಾದವು ಎಂದು ಸರ್ಕಾರವನ್ನು ಅವರು ಪ್ರಶ್ನಿಸಿದ್ದಾರೆ.

ಅಕ್ರಮವಾಗಿ ನಿರ್ಮಾಣಗೊಂಡಿರುವ ಈ ವಸಾಹತುಗಳಿಗೆ ಇಷ್ಟು ವೇಗವಾಗಿ ವಿದ್ಯುತ್ ಸಂಪರ್ಕ ನೀಡಿದವರು ಯಾರು ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ರಾಜ್ಯ ಸರ್ಕಾರವೇ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲು ಮತ್ತು ಅಕ್ರಮ ವಲಸಿಗರು ನೆಲೆಸಲು ಪ್ರೋತ್ಸಾಹ ನೀಡುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.

RELATED ARTICLES
- Advertisment -
Google search engine

Most Popular