ಚಿಕ್ಕಮಗಳೂರು: ಹಳೇ ಪ್ರಿಯತಮೆಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಕ್ಕೆ ಆಕೆಯ ಅಣ್ಣ ಹಾಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಸೇರಿ ಮಾಜಿ ಪ್ರಿಯತಮನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಉಡೇವಾ ಗ್ರಾಮದ ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಮೃತ ಮಂಜು ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆಕೆಯ ಮನೆಯವರು ಆತ ಬೇಡ ಅಂತ ವೇಣು ಎಂಬ ಬೇರೆ ಹುಡುಗನ ಜೊತೆ ಆಕೆಯ ಮದುವೆಯನ್ನ ನಿಶ್ಚಯ ಮಾಡಿದ್ದರು. ಆದರೆ, ಕಳೆದ 2 ದಿನಗಳ ಹಿಂದೆ ಆಕೆಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದ. ಇದರಿಂದ ಕೆರಳಿದ ಯುವತಿಯ ಅಣ್ಣ ಹಾಗೂ ನಿಶ್ಚಿತಾರ್ಥ ಮಾಡಿಕೊಂಡು ಯುವಕ ಮಂಜುಗೆ ಕರೆ ಮಾಡಿ ಕರೆಸಿಕೊಂಡು ಮಾತನಾಡುವಾಗ ಚಾಕು ಇರಿದಿದ್ದಾರೆ.
ಕೂಡಲೇ ಆತನನ್ನ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಎದೆಮಟ್ಟಕ್ಕೆ ಬೆಳೆದ ಮಗನನ್ನ ಕಳೆದುಕೊಂಡ ಮಂಜು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಸಹೋದರ ಕಿರಣ್ ಹಾಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ವೇಣುವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



