ಗೌರಿಬಿದನೂರು: ಜನರು ಇ-ಖಾತೆಗಾಗಿ ನಗರಸಭೆ ಕಚೇರಿಗೆ ಅಲೆಯುವುದು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ನಗರಸಭೆ ಕಚೇರಿಯಲ್ಲಿ ಪ್ರತಿ ತಿಂಗಳೂ ಇ-ಖಾತಾ ಅದಾಲತ್ ಮೂಲಕ ಜನರಿಗೆ ನೇರವಾಗಿ ಇ-ಖಾತೆಯನ್ನು ವಿತರಿಸುತ್ತಿದ್ದೇವೆ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತಿಳಿಸಿದರು.
ಈ ಕುರಿತು ನಗರಸಭೆಯ ಸಭಾಂಗಣದಲ್ಲಿ ನಡೆದ ಇ- ಖಾತಾ ಅದಾಲತ್ ಕಾರ್ಯಕ್ರಮದಲ್ಲಿ ಫಲಾನು ಭವಿಗಳಿಗೆ ಇ-ಖಾತೆ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಿ ಮಾತನಾಡಿದ ಅವರು, ಇ-ಖಾತೆಗಾಗಿ ಸಾರ್ವಜನಿಕರು ನಗರಸಭೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟುವುದೇ ನನ್ನ ಮೂಲ ಉದ್ದೇಶ ಎಂದು ತಿಳಿಸಿದರು.
ಅಲ್ಲದೆ ಇದುವರೆಗೂ ಸುಮಾರು 6500 ಇ- ಖಾತೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಇನ್ನು ಮುಂದೆ ಇ ಸ್ವತ್ತು ಕರ್ನಾಟಕದ ಆಫ್ ಮೂಲಕ ಸಾರ್ವಜನಿಕರು ಮನೆಯಲ್ಲೇ ಇ-ಖಾತೆಗಾಗಿ ಸ್ವತ್ತು ಪಡೆಯಬಹುದು ಎಂದರು.
ಬಳಿಕ ನಗರಸಭೆ ಪೌರಾಯುಕ್ತ ರಮೇಶ್ ಮಾತನಾಡಿ, ಆಸ್ತಿ ಕಣಜ ದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ- ಖಾತಾವನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಈ ಮಾಹಿತಿಗಳನ್ನು ನೇರವಾಗಿ ವೀಕ್ಷಿಸಬಹುದು. ಸದರಿ ಮಾಹಿತಿಗಳ ಆಧಾರದ ಬಗ್ಗೆ ತಕರಾರಿದ್ದಲ್ಲಿ ಸಾರ್ವಜನಿಕರು ಇ-ಆಸ್ತಿ ತಂತ್ರಾಂಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದು ಅಲ್ಲದೆ ನಮೂದಿಸಿದ ಮಾಹಿತಿ ನಿಖರತೆಯನ್ನು ಪರಿಶೀಲಿಸಿ ಅನುಮೋದಿಸಲಾಗುವುದು. ಅಂತಿಮವಾಗಿ ಇ-ಖಾತಾವನ್ನು ಸಾರ್ವಜನಿಕರು ತಮ್ಮ ಮನೆಯಲ್ಲೇ ಕುಳಿತು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಇ-ಖಾತಾ ಪಡೆಯಲು ಬೇಕಾದ ದಾಖಲಾತಿಗಳು ಮಾಲೀಕರ ಭಾವಚಿತ್ರ ಮತ್ತು ಆಧಾರ, ಆಸ್ತಿ ತೆರಿಗೆ ಎಸ್ಎಎಸ್ ಚಲನ್ ಸಂಖ್ಯೆ, ಸ್ವತ್ತಿನ ಕ್ರಯ/ ನೋಂದಾಯಿತ ಪತ್ರ ಸಂಖ್ಯೆ, ವಿದ್ಯುತ್ ಆರ್ ಆರ್ ಸಂಖ್ಯೆ, ಸ್ವತ್ತಿನ ಛಾಯಾಚಿತ್ರ, ಇ ಸಿ ನಮೂನೆ 15/16, ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳ ಸಮೇತ ಆನ್ ಲೈನನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಕಲಾವಧಿಯೊಳಗಾಗಿ ಇ ಖಾತಾ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಗೌರಿಬಿದನೂರು ನಗರಸಭೆ ಕಂದಾಯ ಶಾಖೆಗೆ ಸಂಪರ್ಕಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ನಗರಸಭೆ ಮಾಜಿ ಸದಸ್ಯ ರಾಜ್ ಕುಮಾರ್, ನಾಮನಿರ್ದೇಶನ ಸದಸ್ಯ ಜಯರಾಮ್, ಕೆ.ಹೆಚ್.ಪಿ ಫೌಂಡೇಶನ್ ನಿರ್ದೇಶಕ ಶ್ರೀನಿವಾಸ ಗೌಡ ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



