ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದಾಗ ಅವರಿಗೆ ಬೇಕಾಗಿರುವುದು ಕೇವಲ ವೆನೆಜುವೆಲಾದ ತೈಲ ಮಾತ್ರವಲ್ಲ, ದೇಶದ ಕೀಲಿಕೈ ಕೂಡ ಎಂಬುದು ಸ್ಪಷ್ಟವಾಗುತ್ತದೆ.
ಅಮೆರಿಕವು ಇತ್ತೀಚೆಗೆ ವೆನೆಜುವೆಲಾ ವಿರುದ್ಧ ಮಿಲಿಟರಿ ದಾಳಿ ನಡೆಸಿ, ಅದರ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿತ್ತು. ಅಷ್ಟೇ ಅಲ್ಲದೆ ಇದೀಗ ಡೊನಾಲ್ಡ್ ಟ್ರಂಪ್ ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವುದು ಅಚ್ಚರಿಯನ್ನುಂಟು ಮಾಡಿದ್ದು, ಅವರು ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದಕ್ಕೆ ಜನರು ನಿಜವಾಗಿಯೂ ನಿಮಗೆ ಬೇಕಾಗಿರುವುದು ಏನು ಎಂದು ಟ್ರಂಪ್ರನ್ನು ಪ್ರಶ್ನೆ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಅಮೆರಿಕದ ಅಧ್ಯಕ್ಷ ಟ್ರಂಪ್ ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷರು ಎಂದು ಬಣ್ಣಿಸಿಕೊಂಡಿದ್ದಾರೆ.
ದೇಶದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ವೆನೆಜುವೆಲಾದ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಜನರು ಟ್ರಂಪ್ ಅವರ ಉದ್ದೇಶಗಳನ್ನು ಪ್ರಶ್ನಿಸಿದ್ದಾರೆ. ವೆನೆಜುವೆಲಾದ ತೈಲ ನಿಕ್ಷೇಪಗಳ ಕುರಿತು ಟ್ರಂಪ್ ನಿರಂತರವಾಗಿ ತೈಲ ಕಂಪನಿಗಳೊಂದಿಗೆ ಸಭೆ ನಡೆಸುತ್ತಿರುವ ಮತ್ತು ಇರಾನ್ ಮತ್ತು ಗ್ರೀನ್‌ಲ್ಯಾಂಡ್ ಕುರಿತು ನಿರಂತರವಾಗಿ ಬೆದರಿಕೆ ಹೇಳಿಕೆಗಳನ್ನು ನೀಡುತ್ತಿರುವ ಸಮಯದಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇನ್ನೂ ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಅವರ ಬಂಧನದ ನಂತರ, ಸುರಕ್ಷಿತ, ನ್ಯಾಯಯುತ ಮತ್ತು ವಿವೇಚನಾಯುಕ್ತ ಅಧಿಕಾರ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳುವವರೆಗೆ ಅಮೆರಿಕವು ವೆನೆಜುವೆಲಾದ ಸರ್ಕಾರವನ್ನು ನಡೆಸುತ್ತದೆ ಎಂದು ಟ್ರಂಪ್ ಹೇಳಿಕೊಂಡಿದ್ದರು.
ವೆನೆಜುವೆಲಾದ ಪರಿಸ್ಥಿತಿಯ ಕುರಿತು ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದಲ್ಲಿನ ಬೆಳವಣಿಗೆಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಮತ್ತು ವಾಷಿಂಗ್ಟನ್ ತನ್ನ ನಾಯಕತ್ವದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಇತ್ತೀಚೆಗೆ, ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ವಿಶ್ವದ ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಭೇಟಿಯಾದ ಅವರು, ವೆನೆಜುವೆಲಾದಲ್ಲಿ ಹೂಡಿಕೆಗಳು ಈಗ ವೆನೆಜುವೆಲಾ ಸರ್ಕಾರದೊಂದಿಗೆ ಅಲ್ಲ, ನೇರವಾಗಿ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಇರುತ್ತವೆ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಟ್ರಂಪ್ ಭದ್ರತಾ ಖಾತರಿಗಳನ್ನು ನೀಡಿದರು ಮತ್ತು ಗಮನಾರ್ಹ ಹೂಡಿಕೆಗಳಿಗಾಗಿ ತೈಲ ಉದ್ಯಮಕ್ಕೆ ಮುಕ್ತ ಆಹ್ವಾನವನ್ನು ನೀಡಿದ್ದು, ಯುನೈಟೆಡ್ ಸ್ಟೇಟ್ಸ್ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಚೀನಾ ಅಥವಾ ರಷ್ಯಾ ವೆನೆಜುವೆಲಾದಲ್ಲಿ ಬಲವಾದ ಹಿಡಿತ ಸಾಧಿಸುತ್ತಿತ್ತು ಎಂದಿದ್ದಾರೆ.



