ದಾವಣಗೆರೆ: ಮನ್ರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ 11 ವರ್ಷ ಬೇಕಾಯಿತೇ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನಿಸಿದ್ದು, ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದ್ದರೆ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಅವಕಾಶವಿತ್ತು. ಆದರೆ ಇದನ್ನು ಬಿಟ್ಟು ಯೋಜನೆಯ ಮೂಲಸ್ವರೂಪವನ್ನೇ ಬದಲಿಸಿದೆ ಎಂದು ಹರಿಹಾಯ್ದಿದ್ದಾರೆ.
ಇನ್ನೂ ಕಾಂಗ್ರೆಸ್ ಸರ್ಕಾರ ಮನ್ರೇಗಾ ಯೋಜನೆಯ ಸ್ವರೂಪ ಬದಲಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯದಲ್ಲಿ ಹೋರಾಟ ಕೈಗೆತ್ತಿಕೊಂಡಿದ್ದು, ಪಕ್ಷದ ಎಲ್ಲ ಕಾರ್ಯಕರ್ತರು, ಮನರೇಗಾ ಕಾರ್ಮಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಅಲ್ಲದೆ ಈ ಯೋಜನೆ ಗ್ರಾಮೀಣ ಪ್ರದೇಶದ ಬಡವರಿಗೆ ಕೂಲಿ ನೀಡಿ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿತ್ತು. ಈ ವೇಳೆ ಕೇಂದ್ರ ಮತ್ತು ರಾಜ್ಯದ ಅನುದಾನದ ಪಾಲನ್ನು 60:40ಕ್ಕೆ ಬದಲಾವಣೆ ಮಾಡಿರುವುದು ಕೂಡ ಆಕ್ಷೇಪಾರ್ಹ. ಇನ್ನೂ ಈ ಯೋಜನೆಯಿಂದ ಮಹಾತ್ಮ ಗಾಂಧೀಜಿ ಹೆಸರನ್ನು ಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದೆ ಎಂದರಲ್ಲದೆ, ಕೇಂದ್ರ ಸರ್ಕಾರದ ಈ ಹುನ್ನಾರವನ್ನು ವಿರೋಧಿಸಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.



