ಮೈಸೂರು : ರಾಜ್ಯ ರಾಜಕೀಯದಲ್ಲಿ ನಾಯಕತ್ವ ಪ್ರಶ್ನೆಯ ಊಹಾಪೋಹಗಳ ನಡುವೆ, ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಯಾವುದೇ ಮಾತುಕತೆ ನಡೆಸದೇ, ಡೆಲ್ಲಿಗೆ ಇಬ್ಬರನ್ನೂ ಆದಷ್ಟು ಬೇಗ ಕರೆಸುತ್ತೇವೆ ಎಂದಷ್ಟೇ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನ ಗುಡ್ಲೂರು ಕಾರ್ಯಕ್ರಮದಿಂದ ರಾಹುಲ್ ಗಾಂಧಿ ವಾಪಸ್ ಆಗುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ. ನಿನ್ನೆ ಮಧ್ಯಾಹ್ನ 2:20 ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು. 2:35 ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ತಮಿಳುನಾಡಿನ ಗುಡಲೂರಿಗೆ ಪಯಣ ಬೆಳೆಸಿದರು. ನಂತರ ಸಂಜೆ 5:45 ಕ್ಕೆ ಹೆಲಿಕಾಪ್ಟರ್‌ನಲ್ಲಿ ತಮಿಳುನಾಡಿನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಂಜೆ 6 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸ್ ತೆರಳಿದರು.
15 ನಿಮಿಷವಷ್ಟೇ ಮೈಸೂರು ವಿಮಾನ ನಿಲ್ದಾಣದಲ್ಲಿದ್ದ ರಾಹುಲ್ ಗಾಂಧಿ ಕೇವಲ 2 ನಿಮಿಷವಷ್ಟೇ ಸಿಎಂ, ಡಿಸಿಎಂಗೆ ಭೇಟಿಗೆ ಅವಕಾಶ ಸಿಕ್ಕಿತು. ಇಬ್ಬರೂ ನಾಯಕರು ಉಭಯ ಕುಶಲೋಪರಿ ವಿಚಾರಿಸಿದ್ದರು ಎನ್ನಲಾಗಿದ್ದು, ಅಧಿಕಾರ ಹಂಚಿಕೆ ಗೊಂದಲ ಶುರುವಾದ ಮೇಲೆ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರನ್ನು ಸಿದ್ದು-ಡಿಕೆಶಿ ಭೇಟಿಯಾಗಿದ್ದಾರೆ. ಆದರೂ ಈ ಭೇಟಿಯಲ್ಲಿ ಯಾವುದೇ ಮಾತುಕತೆ ಇರಲಿಲ್ಲ. ಉಭಯ ಕುಶಲೋಪರಿಗಷ್ಟೆ ಸೀಮಿತವಾಗಿದೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು ರಾಹುಲ್ ಗಾಂಧಿ ಅವರನ್ನು ಸಿಎಂ ಮತ್ತು ಡಿಕೆಶಿ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ವಿಶೇಷ ವಿಮಾನದಿಂದ ಇಳಿದು ಎರಡೇ ನಿಮಿಷಕ್ಕೆ ತಮಿಳುನಾಡು ಪ್ರವಾಸಕ್ಕೆ ರಾಹುಲ್ ಗಾಂಧಿ ಹೊರಟರು. ರಾಹುಲ್ ಗಾಂಧಿಯನ್ನು ಹೆಲಿಕಾಪ್ಟರ್ ಹತ್ತಿಸಿ ನಾಯಕರು ಹೊರಬಂದರು. ಏರ್‌ಪೋರ್ಟ್ ಹೊರಗೆ ಬರುತ್ತಿದ್ದಂತೆ ಇಬ್ಬರೂ ಪ್ರತ್ಯೇಕವಾಗಿ ತೆರಳಿದರು.
ಈ ವೇಳೆ ರಾಹುಲ್ ಗಾಂಧಿಗೆ ಮೈಸೂರು ಅರಮನೆ ಪ್ರತಿಕೃತಿಯನ್ನು ಸಿಎಂ ಸಿದ್ದರಾಮಯ್ಯ ಉಡುಗೊರೆಯಾಗಿ ನೀಡಿದರು. ಆನೆ ಪ್ರತಿಕೃತಿಯನ್ನು ಸಚಿವ ಕೆ.ಜೆ ಜಾರ್ಜ್ ಗಿಫ್ಟ್ ಕೊಟ್ಟರು.
ಈ ನಡುವೆ ಬಜೆಟ್ ಮಂಡನೆ ಬಗ್ಗೆ ಸಿಎಂ ರಾಹುಲ್ ಗಮನ ಸೆಳೆದರೆ, ಪವರ್ ಶೇರ್ ಮಾತುಕತೆ ಬಗ್ಗೆ ಡಿಕೆಶಿ ಗಮನ ಸೆಳೆದರು ಎನ್ನಲಾಗಿದ್ದು, ಈ ತಿಂಗಳ ಅಂತ್ಯಕ್ಕೆ ಸಿಎಂ, ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆಸುವ ಸಾಧ್ಯತೆಯಿದೆ. ಅಲ್ಲಿಯೇ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ನಂತರ ಸಿಎಂ, ಡಿಸಿಎಂ ದ್ವಿಮುಖವಾಗಿ ಹೊರಟಿದ್ದು, ಮಾಧ್ಯಮಗಳ ಜೊತೆ ಮಾತನಾಡಲು ಸಿಎಂ ಮುಂದಾದಾಗ ಡಿಕೆಶಿ ಅಲ್ಲಿಂದ ಕಾರು ಹತ್ತಿ ಹೊರಟಿದ್ದಾರೆ.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾನು ಡಿಕೆ ಇಬ್ಬರೂ ಬದ್ಧವೆಂದಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೂ ಸಿದ್ಧತೆ ನಡೆಸುತ್ತಿರೋದಾಗಿ ಸಿಎಂ ಹೇಳಿದ್ದಾರೆ.



