ಬೆಂಗಳೂರು : ಕರ್ನಾಟಕದಿಂದ ಕೇರಳದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಕೇರಳದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಿಂದ ತೆರಳುವ ಅಯ್ಯಪ್ಪ ಸ್ವಾಮಿ ಭಕ್ತರ ವಾಹನಗಳನ್ನು ಕೆಲವು ಕಡೆ ತಡೆದಿರುವ ಹಿನ್ನೆಲೆಯಲ್ಲಿ ಕೇರಳದ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ರಾಮಲಿಂಗಾ ರೆಡ್ಡಿ ಅವರು ಭಕ್ತಧಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್‌ಹಾಗೂ ಸಾರಿಗೆ ಇಲಾಖೆ ನಿರ್ದೇಶಕ ರಾಜೇಂದ್ರ ಕಟಾರಿಯ ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ಕೇರಳ ಅಧಿಕಾರಿಗಳ ಜೊತೆಯೂ ಸಂಪರ್ಕ ಸಾಧಿಸುವಂತೆ ಸೂಚನೆ ನೀಡಿದ್ದಾರೆ.
ಕೇರಳ ಅಧಿಕಾರಿಗಳ ಜೊತೆ ಮಾತನಾಡಿದ ವೇಳೆ, ಇಲ್ಲಿನ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಪಾಲನೆ ಮಾಡುತ್ತಿದ್ದೇವೆ. ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಆನ್‌ಲೈನ್‌ನಲ್ಲಿ ನೋಂದಾವಣಿ ಆಗಿ ಪ್ರತಿದಿನ ಆಗಮಿಸುವ 4 ಸಾವಿರ ವಾಹನಗಳನ್ನು ಮಾತ್ರ ಪ್ರವೇಶಿಸಲು ಅನುಮತಿ ನೀಡಬೇಕೆಂಬ ನಿಯಮವನ್ನು ಹೈಕೋರ್ಟ್ ಆದೇಶದ ಮೇರೆಗೆ ಪಾಲನೆ ಮಾಡಲಾಗುತ್ತಿದೆ ಎಂದು ಕರ್ನಾಟಕದ ಅಧಿಕಾರಿಗಳಿಗೆ ಕೇರಳ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.
ನಾವು ಕಟ್ಟುನಿಟ್ಟಾಗಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುತ್ತಿದ್ದೇವೆಯೇ ಹೊರತು, ಇದರಲ್ಲಿ ಯಾರೊಬ್ಬರಿಗೂ ಅನಗತ್ಯವಾಗಿ ತೊಂದರೆ ನೀಡುತ್ತಿಲ್ಲ. ಅಯ್ಯಪ್ಪ ಸ್ವಾಮಿ ಭಕ್ತರ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಎಂಬ ಮಾಹಿತಿ ನೀಡಿದ್ದಾರೆ.
ನ್ಯಾಯಾಲಯದ ನಿರ್ದೇಶನ ಪಾಲನೆ ಮಾಡುವುದರ ಜೊತೆಗೆ ಆಗಮಿಸುವ ಭಕ್ತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, ಅಯ್ಯಪ್ಪ ಸ್ವಾಮಿ ಭಕ್ತರು ಅನಗತ್ಯವಾಗಿ ಗೊಂದಲಗಳಿಗೆ ಕಿವಿಗೊಡಬಾರದು. ಅಲ್ಲಿನ ಸರ್ಕಾರ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುತ್ತಿದೆ ಆದರೂ ಸರ್ಕಾರ ಅಯ್ಯಪ್ಪ ಭಕ್ತರ ರಕ್ಷಣೆಗೆ ಸಿದ್ಧವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



