ಮಂಗಳೂರು : ಧನುರ್ಮಾಸ ಹಿನ್ನೆಲೆ ದೇಗುಲಕ್ಕೆಂದು ಮುಜಾನೆಯೇ ಮನೆಯಿಂದ ಹೊರಟಿದ್ದ 9ನೇ ತರಗತಿಯ ಬಾಲಕನೊಬ್ಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಸುಮಂತ್ (15) ಮೃತ ದುರ್ದೈವಿಯಾಗಿದ್ದು, ಬಾಲಕನ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.
ಕುವೆಟ್ಟು ಸಮೀಪದ ಸಂಬೋಳ್ಯ ಬರಮೇಲು ನಿವಾಸಿಯಾದ ಸುಬ್ರಹ್ಮಣ್ಯ ನಾಯಕ್ ಅವರ ಮಗ ಸುಮಂತ್ ಧನುರ್ಮಾಸದ ಹಿನ್ನಲೆಯಲ್ಲಿ ಬೆಳಗ್ಗೆ 4 ಗಂಟೆಗೆ ಎದ್ದು ನಾಳದಲ್ಲಿರೋ ದೇವಸ್ಥಾನಕ್ಕೆ ಹೋಗಿಬರುತ್ತಿದ್ದ. ಹಾಗೆ ಇಂದು ಕೂಡ ದೇವಸ್ಥಾನಕ್ಕೆ ಅಂತಾ ಹೋಗಿದ್ದಾನೆ. ಆದರೆ ಈತನ ಸಹೋದರ ಸುದರ್ಶನ್ಗೆ ಬೆಳಗ್ಗೆ 6.30ರ ಸುಮಾರಿಗೆ ದೇವಸ್ಥಾನದಿಂದ ಸ್ನೇಹಿತರು ಕರೆ ಮಾಡಿ ಸುಮಂತ್ ದೇವಸ್ಥಾನಕ್ಕೆ ಯಾಕೆ ಬರಲಿಲ್ಲ ಅಂತಾ ಕೇಳಿದ್ದಾರೆ. ಆಗ ಸುಮಂತ್ ಮಿಸ್ಸಿಂಗ್ ಆಗಿರುವ ವಿಚಾರ ಮನೆಯವರಿಗೆ ಗೊತ್ತಾಗಿದೆ. ಮನೆಯಿಂದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಿ ರಸ್ತೆ ಸಮೀಪ ನಿಲ್ಲಿಸಿದ್ದ ಬೈಸಿಕಲ್ ತೆಗೆದುಕೊಂಡು ಸುಮಂತ್ ದೇಗುಲಕ್ಕೆ ಹೋಗುತ್ತಿದ್ದ. ಅಲ್ಲಿಗೆ ಹೋಗಿ ನೋಡಿದ್ರೆ ಸೈಕಲ್ ನಿಲ್ಲಿಸಿದ್ದಲಿಯೇ ಇತ್ತು. ಇದ್ರಿಂದ ಅನುಮಾನಗೊಂಡು ಆತನನ್ನು ಎಲ್ಲರೂ ಹುಡುಕಿದ್ದಾರೆ. ಈ ವೇಳೆ ರಕ್ತದ ಹನಿಗಳು ಪತ್ತೆಯಾಗಿದ್ದು, ಅದನ್ನು ಹಿಂಬಾಲಿಸಿ ಹೋದಾಗ ಸಮೀಪದ ಕೆರೆ ಪಕ್ಕದಲ್ಲೇ ಇದ್ದ ಕಲ್ಲೊಂದಕ್ಕೆ ರಕ್ತ ಅಂಟಿಕೊಂಡಿರೋದು ಕಾಣಿಸಿದೆ. ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಬಂದು ಕೆರೆಯಲ್ಲಿ ಹುಡುಕಾಡಿದಾಗ ಅಲ್ಲಿ ಸುಮಂತ್ ಮೃತದೇಹ ಪತ್ತೆಯಾಗಿದೆ.

ನಾಯಿ ಅಟ್ಟಿಸಿಕೊಂಡು ಬಂದು ಕಚ್ಚಿದ ಕಾರಣ ಬಾಲಕ ಓಡಿ ಹೋಗಿ ಕೆರೆಗೆ ಬಿದ್ದಿದ್ದಾನೆ ಅಂತಾ ಆರಂಭದಲ್ಲಿ ಅನುಮಾನಿಸಲಾಗಿತ್ತು. ಚಿರತೆ ದಾಳಿಯಿಂದ ಸಾವನ್ನಪ್ಪಿರಬಹುದು ಅಂತಲೂ ಅಂದಾಜಿಸಲಾಗಿತ್ತು. ಆದ್ರೆ ಬಾಕಲನ ತಲೆಯ ಮೇಲ್ಭಾಗದಲ್ಲಿ ಮಚ್ಚಿನಲ್ಲಿ ಹೊಡೆದಿರುವ ರೀತಿ ಎರಡು ಕಡೆ ಗಾಯವಾಗಿರೋದು ಕಂಡುಬಂದಿದೆ. ಹಾಗಾಗಿ ಇದು ಕೊಲೆಯಾಗಿರಬಹುದೆಂಬ ಅನುಮಾನ ಮೂಡಿದ್ದು, ಎಸ್ಪಿ ಡಾ.ಅರುಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಾಗ್ ಸ್ಕ್ವಾಡ್ನಿಂದಲೂ ತಪಾಸಣೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಘಟನೆ ಹೇಗಾಯ್ತು ಅಂತಾ ಗೊತ್ತಾಗಲಿದ್ದು, ಎಲ್ಲ ಆಯಾಮದಲ್ಲಿಯೂ ತನಿಖೆ ಮಾಡುತ್ತೇವೆ ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.



