ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಓಡಿಲ್ನಳ ಗ್ರಾಮದ ಸಂಬೋಳ್ಯ ಸಮೀಪ
ದೇವಸ್ಥಾನಕ್ಕೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಬಾಲಕನ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ.ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15)ನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಆತನ ತಲೆಗೆ ಮೂರು ಬಲವಾದ ಪೆಟ್ಟು ಬಿದ್ದಿರುವುದು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ವೋಲೀಸರು ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆಯನ್ನು ಆರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಬಗೆಗಿನ ಮಾಹಿತಿಗಳು ಲಭ್ಯವಾಗುತ್ತಿದ್ದು ಬಾಲಕನ ತಲೆಗೆ ಕತ್ತಿ ಅಥವಾ ಇನ್ಯಾವುದೇ ಆಯುಧದಿಂದ ಬಲವಾದ ಮೂರು ಹೊಡೆತಗಳು ಬಿದ್ದಿದೆ. ಅರೆಪ್ರಜ್ಞಾವಸ್ಥೆಯಲ್ಲಿ ಈತ ನೀರಿಗೆ ಬಿದ್ದಿರುವ ಸಾಧ್ಯತೆಯಿದೆ ಎನ್ನಲಾಗಿದ್ದು ಶ್ವಾಸಕೋಶದಲ್ಲಿ ನೀರು ತುಂಬಿರುವುದಾಗಿಯೂ ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿರುವುದಾಗಿ ತಿಳಿದು ಬಂದಿದೆ.
ಇದೊಂದು ಕೊಲೆ ಪ್ರಕರಣ ಎಂಬ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಿಂದಲೇ ದೃಢಪಟ್ಟಿದ್ದು ಇದೇ ಹಿನ್ನಲೆಯಲ್ಲಿ ಪೊಲೀಸರು ಸಮಗ್ರವಾದ ತನಿಖೆ ಮುಂದುವರಿದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.



