ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆಗೆ ಅಶ್ಲೀಲವಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಅಲ್ಲದೆ ಎರಡು ದಿನಗಳಿಂದ ರಾಜೀವ್ ಗೌಡ ತಲೆಮರೆಸಿಕೊಂಡಿದ್ದು, ಫೋನ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ. ರಾಜೀವ್ ಗೌಡ ಬಂಧನಕ್ಕೆ ಪೊಲೀಸರು 3 ತಂಡ ರಚನೆ ಮಾಡಿದ್ದಾರೆ.
ಗುರುವಾರ ರಾಜೀವ್ ಗೌಡ ಮನೆ, ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಶೋಧ ನಡೆಸಲಾಯಿತು. ರಾಜೀವ್ ಗೌಡ ಪತ್ನಿ ಪೊಲೀಸರ ಜೊತೆ ರಂಪಾಟ ಮಾಡಿದ್ದಾರೆ. ಸರ್ಚ್ ವಾರಂಟ್ ಇಲ್ಲದೇ ಮನೆಗೆ ಬರಬೇಡಿ ಎಂದು ಆವಾಜ್ ಹಾಕಿದ್ದಾರೆ.
ಈ ನಡುವೆ ರಾಜೀವ್ಗೌಡ ವರ್ತನೆ ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೂ ಮುಜುಗರ ತಂದಿದೆ. ಇದೀಗ ಈ ಪ್ರಕರಣ ಹೈಕಮಾಂಡ್ ಅಂಗಳಕ್ಕೂ ತಲುಪಿದ್ದು, ಈ ಬಗ್ಗೆ ವರದಿ ನೀಡುವಂತೆ ಕೆಪಿಸಿಸಿ ಸೂಚಿಸಿದೆ.
ಎಐಸಿಸಿ ಸೂಚನೆ ಬೆನ್ನಲ್ಲೇ ಕೆಪಿಸಿಸಿ ರಾಜೀವ್ ಗೌಡನಿಗೆ ನೋಟಿಸ್ ನೀಡಿದ್ದು, ವಾರದೊಳಗೆ ಸೂಕ್ತ ಉತ್ತರ ನೀಡದಿದ್ದರೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದೆ ಎನ್ನಲಾಗಿದ್ದು, ಮಹಿಳಾ ಅಧಿಕಾರಿಗೆ ಅನ್ಯಾಯವಾದ ಹಿನ್ನೆಲೆಯಲ್ಲಿ ರಾಜೀವ್ ಗೌಡ ವಿರುದ್ಧ ಜಿಲ್ಲಾ ಸರ್ಕಾರಿ ನೌಕರರ ಸಂಘ ತಿರುಗಿಬಿದ್ದಿದೆ. ಅಲ್ಲದೆ ಈ ವಿಚಾರವಾಗಿ ರಾಜೀವ್ ಗೌಡ ಬಂಧಿಸುವಂತೆ ಆಗ್ರಹಿಸಿ ಇಂದು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಿದೆ.
ಇನ್ನೊಂದೆಡೆ ಪೌರಾಡಳಿತ ಸಚಿವ ರಹೀಂ ಖಾನ್, ತಮ್ಮ ಇಲಾಖೆಯ ಮಹಿಳಾ ಅಧಿಕಾರಿಗೆ ಅನ್ಯಾಯವಾದರೂ ತುಟಿ ಬಿಚ್ಚದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಈ ಮಧ್ಯೆ, ಪೊಲೀಸರು ರಾಜೀವ್ ಗೌಡನ ಕ್ರಿಮಿನಲ್ ಇತಿಹಾಸ ಕೆದಕಲು ಶುರುಮಾಡಿದ್ದಾರೆ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಈವರೆಗೆ 9 ಕೇಸ್ ದಾಖಲಾಗಿರುವುದು ಬಯಲಾಗಿದೆ. ಶಿಡ್ಲಘಟ್ಟ ನಗರ, ಹೊಸಕೋಟೆ, ದೇವನಹಳ್ಳಿ ಸೇರಿ ಬೆಂಗಳೂರಲ್ಲಿ ಕೇಸ್ಗಳಿವೆ. ರಿಯಲ್ ಎಸ್ಟೇಟ್ನಲ್ಲಿ ಮೋಸ, ವಂಚನೆ ಸೇರಿ ವಿವಿಧ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.



