Friday, January 16, 2026
Google search engine

Homeವಿದೇಶಕೊನೆಗೂ ಟ್ರಂಪ್‌ ಕೈ ಸೇರಿದ ನೊಬೆಲ್‌ ಶಾಂತಿ ಪ್ರಶಸ್ತಿ

ಕೊನೆಗೂ ಟ್ರಂಪ್‌ ಕೈ ಸೇರಿದ ನೊಬೆಲ್‌ ಶಾಂತಿ ಪ್ರಶಸ್ತಿ

ವಾಷಿಂಗ್ಟನ್ : ವೆನೆಜುವೆಲಾದ ವಿರೋಧ ಪಕ್ಷದ ಪ್ರಬಲ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಶ್ವೇತಭವನದಲ್ಲಿ ಭೇಟಿಯಾಗಿ, ತಮಗೆ ಸಂದ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಟ್ರಂಪ್ ಅವರಿಗೆ ನೀಡಿದರು.

ತಮ್ಮ ನೊಬೆಲ್ ಪದಕವನ್ನು ಟ್ರಂಪ್‌ಗೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ್ಮ ಸ್ವಾತಂತ್ರ್ಯದ ಬಗ್ಗೆ ಅವರು ಹೊಂದಿರುವ ಅನನ್ಯ ಬದ್ಧತೆಗೆ ಸಂದ ಗೌರವವಾಗಿದೆ ಎಂದರು. ಇನ್ನೂ ಮಚಾಡೊ ಅವರ ಈ ನಡೆಯನ್ನು ಟ್ರಂಪ್ ಕೂಡ ಶ್ಲಾಘಿಸಿದ್ದು, ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್, ಮಾರಿಯಾ ಕೊರಿನಾ ಮಚಾಡೊ ಒಬ್ಬ ಅದ್ಭುತ ಮಹಿಳೆ. ಅವರು ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಅವರು ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ದು ಪರಸ್ಪರ ಗೌರವದ ಸಂಕೇತವಾಗಿದೆ. ಧನ್ಯವಾದಗಳು ಮಾರಿಯಾ ಎಂದು ತಿಳಿಸಿದ್ದಾರೆ.

ಅಲ್ಲದೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು ಈ ಭೇಟಿಯನ್ನು ದೃಢಪಡಿಸಿದ್ದು, ಮಚಾಡೊ ಅವರನ್ನು ವೆನೆಜುವೆಲಾದ ಜನರ ಧೈರ್ಯಶಾಲಿ ಧ್ವನಿ ಎಂದು ಕರೆದಿದ್ದಾರೆ. ಆದರೆ, ಈ ಭೇಟಿಯಿಂದಾಗಿ ಮಚಾಡೊ ಅವರ ರಾಜಕೀಯ ಭವಿಷ್ಯದ ಬಗ್ಗೆ ಟ್ರಂಪ್ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಲೀವಿಟ್ ಸ್ಪಷ್ಟಪಡಿಸಿದ್ದು, ವೆನೆಜುವೆಲಾವನ್ನು ಮುನ್ನಡೆಸಲು ಮಚಾಡೊ ಅವರಿಗೆ ಅಲ್ಲಿನ ಜನರ ಪೂರ್ಣ ಬೆಂಬಲವಿಲ್ಲ ಎಂಬ ಟ್ರಂಪ್ ಅವರ ಹಳೆಯ ನಿರ್ಧಾರ ಹಾಗೆಯೇ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ನೊಬೆಲ್‌ ಪ್ರಶಸ್ತಿ ಸಿಕ್ಕಿದ ನಂತರ ಮರಿಯಾ ಅವರು ಈ ಪ್ರಶಸ್ತಿಯನ್ನು ನಾನು ಟ್ರಂಪ್‌ ಅವರಿಗೆ ಅರ್ಪಿಸುವುದಾಗಿ ಅಕ್ಟೋಬರ್‌ 10 ರಂದೇ ಪ್ರಕಟಿಸಿದ್ದರು. ನೊಬೆಲ್‌ ಶಾಂತಿ ಪಾರಿತೋಷಕವು ಎಲ್ಲಾ ವೆನೆಜುವೆಲಾ ಜನರ ಹೋರಾಟಕ್ಕೆ ಸಿಕ್ಕ ಮನ್ನಣೆಯಾಗಿದ್ದು, ಈ ಪುರಸ್ಕಾರವನ್ನ ವೆನೆಜುವೆಲಾದ ದುಃಖಿತ ಜನರು ಹಾಗೂ ಪ್ರಜಾಪ್ರಭುತ್ವ ಪರ ಚಳವಳಿಗೆ ನಿರ್ಣಾಯಕ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅರ್ಪಿಸುವುದಾಗಿ ತಿಳಿಸಿದ್ದರು.

ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಮರಳಿ ಪಡೆಯಲು, ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಗಾಗಿ ಹೋರಾಟ ನಡೆಸಿದ್ದಾಗಿ ಮಾರಿಯಾ ಕೊರಿನಾ ಮಚಾದೋ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ನಾರ್ವೆಯ ನೊಬೆಲ್ ಪ್ರಶಸ್ತಿಯ ಆಯ್ಕೆ ಸಮಿತಿ ಹೇಳಿತ್ತು. ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಬರಾಕ್‌ ಒಬಾಮ ಏನು ಮಾಡಿದ್ದಾರೆ? ಏನು ಮಾಡದ ಒಬಾಮಗೆ ನೊಬೆಲ್‌ ಸಿಗುವುದಾದರೆ ನನಗೆ ಯಾಕೆ ಸಿಗಬಾರದು ಎಂದು ಟ್ರಂಪ್‌ ಈ ಹಿಂದೆ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ಇಸ್ರೇಲ್‌ ಮತ್ತು ಪಾಕಿಸ್ತಾನ ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರ ಹೆಸರನ್ನು ನಾಮ ನಿರ್ದೇಶನ ಮಾಡಿತ್ತು.

ವಿರೋಧ ಪಕ್ಷದ ನಾಯಕಿಯೂ ಆಗಿರುವ ಮಚಾದೋ ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಮಡುರೊ ಅವರ ಸರ್ವಾಧಿಕಾರಿ ಆಡಳಿತವನ್ನು ಧಿಕ್ಕರಿಸಿ ಹೋರಾಟ ನಡೆಸಿದ್ದರು. ಅವರು ಬೆದರಿಕೆಗಳನ್ನು ಎದುರಿಸಿದ್ದಲ್ಲದೆ, ಬಂಧನಕ್ಕೊಳಗಾಗಿದ್ದರೂ ಅಲ್ಲದೆ ಪ್ರಯಾಣ ನಿಷೇಧ ಮತ್ತು ರಾಜಕೀಯ ಕಿರುಕುಳವನ್ನು ಎದುರಿಸಿದ್ದರು. ವೆನೆಜುವೆಲಾದಲ್ಲಿ ಅವರನ್ನು ಐರನ್‌ ಲೇಡಿ ಎಂದು ಕರೆಯಲಾಗುತ್ತಿದೆ.

ಕಳೆದ ಒಂದು ವರ್ಷದಿಂದ ವೆನೆಜುವೆಲಾದಲ್ಲಿ ಅಡಗಿಕೊಂಡು ಹೋರಾಟ ನಡೆಸುತ್ತಿದ್ದ ಮಚಾಡೊ ಅವರಿಗೆ ಇದು ದೊಡ್ಡ ಮಟ್ಟದ ರಾಜತಾಂತ್ರಿಕ ವಿಜಯವಾಗಿದೆ. ಶ್ವೇತಭವನದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಕಳೆದ ಅವರು, ನಂತರ ಕ್ಯಾಪಿಟಲ್ ಹಿಲ್‌ನಲ್ಲಿ ಅಮೆರಿಕದ ಸೆನೆಟರ್‌ಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶ್ವೇತಭವನದ ಹೊರಗೆ ನೆರೆದಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಅಧ್ಯಕ್ಷ ಟ್ರಂಪ್ ಅವರ ಮೇಲೆ ಭರವಸೆ ಇಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular