ಬೆಂಗಳೂರು: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದಿನಿಂದ 2 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದು, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ರಾಹುಲ್ ಗಾಂಧಿ ಮೈಸೂರಿಗೆ ಬಂದು ಹೋದ ಬೆನ್ನಲ್ಲೇ ಡಿಕೆಶಿ ದೆಹಲಿ ಯಾತ್ರೆ ಕುತೂಹಲ ಕೆರಳಿಸಿದ್ದು, ಇದೀಗ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಅಸ್ಸಾಂ ಚುನಾವಣೆ ಹಿನ್ನಲೆ ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ರಾಜ್ಯ ರಾಜಕೀಯದ ಕುರಿತೂ ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ ನಡೆಯುವ ಯಾವುದೇ ಲಕ್ಷಣ ಕಾಣಿಸುತ್ತಿರಲಿಲ್ಲ. ಮೈಸೂರಿಗೆ ಬಂದಿದ್ದ ರಾಹುಲ್ ಗಾಂಧಿಯನ್ನು ವಿಮಾನ ನಿಲ್ದಾಣದಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ್ದರು. ಅದರಲ್ಲೂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ನಿಂತು ಅಧಿಕಾರ ಹಂಚಿಕೆ ಗೊಂದಲವನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರು ಎನ್ನಲಾಗಿತ್ತು. ಆದರೆ ಏರ್‌ಪೋರ್ಟ್ ರನ್‌ವೇನಲ್ಲಿ ಇಂತಹ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದರು ಎಂದೂ ಮೂಲಗಳು ತಿಳಿಸಿದ್ದವು. ಅದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯಗೂ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದರು ಎನ್ನಲಾಗಿದೆ.
ಈ ನಡುವೆ ರಾಹುಲ್ ಗಾಂಧಿಯವರ ಆಹ್ವಾನ ದೊರೆಯುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಉತ್ಸಾಹದಲ್ಲಿ ಸಂಕ್ರಾಂತಿ ಹಬ್ಬದ ನಡುವೆಯೇ ದೆಹಲಿಯತ್ತ ಪ್ರಯಾಣ ನಡೆಸಿದ್ದಾರೆ. ಮುಂದಿನ ವಾರ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕಾಗಿ ತೆರಳುತ್ತಿದ್ದು, ಅದಕ್ಕೂ ಮುನ್ನವೇ ದೆಹಲಿಯಲ್ಲಿ ಭೇಟಿ ಮಾಡಿ ತಮ್ಮ ಗೊಂದಲವನ್ನು ಬಗೆ ಹರಿಸಿಕೊಳ್ಳಲು ಡಿಕೆ ಶಿವಕುಮಾರ್ ಕಾತರರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿವಕುಮಾರ್, ದೆಹಲಿಗೆ ಹೋಗುತ್ತಿದ್ದೇನೆ. ಪಕ್ಷದ ಎಲ್ಲ ನಾಯಕರನ್ನು ಅಲ್ಲಿ ಭೇಟಿ ಮಾಡುತ್ತೇನೆ. ರಾಹುಲ್ ಗಾಂಧಿ ಭೇಟಿಯಾಗುವುದು ಹೊಸದೇನು ಅಲ್ಲ. ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದರು.
ರಾಹುಲ್ ಗಾಂಧಿ ಭೇಟಿ ನಂತರ ನಿಮ್ಮ ಬೆಂಬಲಿಗ ಶಾಸಕರು ಸಂತೋಷವಾಗಿದ್ದಾರೆ. ಅವರ ಅಪೇಕ್ಷೆಯನ್ನು ರಾಹುಲ್ ಬಳಿ ಚರ್ಚಿಸುತ್ತೀರಾ ಎಂದು ಕೇಳಿದಾಗ, ನಾನು ನಿಮ್ಮ (ಮಾಧ್ಯಮ) ಆಸೆಗಳನ್ನು ಅವರ ಮುಂದೆ ಮಂಡಿಸುತ್ತೇನೆ ಎಂದು ವ್ಯಂಗ್ಯವಾಡಿದರು. ಅಂತೆಯೇ ನನ್ನ ಟ್ವೀಟ್ ಅನ್ನು ವಿಭಿನ್ನವಾಗಿ ಅರ್ಥೈಸುವುದರಲ್ಲಿ ಅರ್ಥವಿಲ್ಲ..
ಪ್ರಯತ್ನಗಳು ವಿಭಿನ್ನವಾಗಿ ಮಾಡಿದರೂ ಪ್ರಾರ್ಥನೆಗಳು ವ್ಯರ್ಥವಾಗುವುದಿಲ್ಲ ಎಂಬ ಬಗ್ಗೆ ಮಾಧ್ಯಮಗಳು ನನ್ನ ಟ್ವೀಟ್ ಅನ್ನು ಅರ್ಥೈಸುತ್ತಿವೆ. ಕಾವೇರಿ ಆರತಿ ಮತ್ತು ಮೇಕೆದಾಟುಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ನಮ್ಮ ಪರವಾಗಿ ತೀರ್ಪು ನೀಡುತ್ತಿರುವುದರಿಂದ ನಾನು ಇದನ್ನು ಹೇಳುತ್ತಿದ್ದೇನೆ. ಅದನ್ನು ವಿಭಿನ್ನವಾಗಿ ಅರ್ಥೈಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.
ಅಸ್ಸಾಂ, ಪಶ್ಚಿಮಬಂಗಾಳ, ಕೇರಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ಸಿನ ಉಸ್ತುವಾರಿ ನಾಯಕರ ಮಹತ್ವದ ಸಭೆ ನಡೆಯಲಿದೆ. ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರಾಗಿರುವ ಡಿ.ಕೆ.ಶಿವಕುಮಾರ್, ಸಂಸದೆ ಪ್ರಿಯಾಂಕಾ ಗಾಂಧಿ ಅವರ ಜೊತೆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆದರೆ ಅಸ್ಸಾಂ ಚುನಾವಣೆ ಕೇವಲ ನೆಪಮಾತ್ರವಾಗಿದ್ದು ಅಧಿಕಾರ ಹಂಚಿಕೆ ವಿಚಾರವೇ ಡಿಕೆ ಶಿವಕುಮಾರ್ ದೆಹಲಿ ಭೇಟಿಗೆ ಪ್ರಧಾನ ಕಾರಣ ಎನ್ನಲಾಗಿದೆ.



