ಕೆ ಆರ್ ನಗರ: ಕ್ಷೇತ್ರದಲ್ಲಿಯೂ ಪ್ಲೆಕ್ಸ್ ರಾಜಕೀಯದ ಗಲಾಟೆ ಆರಂಭವಾಗಿದ್ದು ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮತ್ತು ಅವರ ಪುತ್ರ ಅಮಿತ್ ವಿ. ದೇವರಹಟ್ಟಿ ಅವರುಗಳ ಭಾವಚಿತ್ರವಿದ್ದ ಫ್ಲೆಕ್ಸನ್ನು ಕಿತ್ತು ಹರಿದು ಕಾಲಿನಲ್ಲಿ ಒದ್ದೆದ್ದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಚುಂಚನಕಟ್ಟೆ ಶ್ರೀ ರಾಮ ದೇವರ ರಥೋತ್ಸವದ ಅಂಗವಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ತಮ್ಮ ಮುಖಂಡರುಗಳ ಪ್ಲೆಕ್ಸ್ ಹಾಕಿದ್ದಕ್ಕೆ ನಮ್ಮ ಗ್ರಾಮದಲ್ಲಿ ಯಾಕೆ ಹಾಕಿದ್ದೀರಿ ಎಂದು ಯುವಕನೋರ್ವ ಏರಿದ ಧ್ವನಿಯಲ್ಲಿ ಕೂಗಾಡುತ್ತಾ ಕಿತ್ತು ಹರಿದು ಹಾಕಿ ಕಾಲಿನಲ್ಲಿ ಒದೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಸಂಬಂದ ಕೆ.ಆರ್.ನಗರ ಠಾಣೆಗೆ ದೂರು ನೀಡಿರುವ ಕೆಸ್ತೂರು ಕೊಪ್ಪಲು ಗ್ರಾಮದ ಯಶವಂತ್ ಜೆಡಿಎಸ್ ಮುಖಂಡರ ಪ್ಲೆಕ್ಷ್ ಕಟ್ಟಲು ಗ್ರಾಮದ ಸರ್ಕಲ್ ಬಳಿ ಸಿದ್ದರಾಗುತ್ತಿದ್ದಾಗ ರಮೇಶ್ ಎಂಬಾತ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿ ಪ್ಲೆಕ್ಸ್ ಹರಿದು ಹಾಕಿ ಕಾಲಿನಿಂದ ಒದ್ದು ಹೀನಾಯವಾಗಿ ನಿಂದಿಸಿ ನಮ್ಮ ಗ್ರಾಮದಲ್ಲಿ ಶಾಸಕ ಡಿ. ರವಿಶಂಕರ್ ಅವರ ಪ್ಲೆಕ್ಸ್ ಹೊರತುಪಡಿಸಿ ಬೇರೆ ಯಾರದಾದರೂ ಹಾಕಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಹೆದರಿಸಿ ಬೆದರಿಸಿದ್ದಾರೆಂದು ತಿಳಿಸಿದ್ದಾರೆ.
ಜೆಡಿಎಸ್ ಮುಖಂಡ ವಕೀಲ ಅಂಕನಹಳ್ಳಿ ತಿಮ್ಮಪ್ಪ, ಜೆಡಿಎಸ್ ನಗರ ಕಾರ್ಯದರ್ಶಿ ರುದ್ರೇಶ್ ಕೆ. ಆರ್. ನಗರ ಪಟ್ಟಣದ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ ನಂತರ ಕಾರ್ಯ ಪ್ರವೃತ್ತರಾದ ಪೊಲೀಸರು ಸಾಮಾಜಿಕ ಜಾಲತಾಣ ಹಾಗೂ ವಿಡಿಯೋನಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಕಲೆ ಹಾಕಿ ಕ್ರಮಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಬಳ್ಳಾರಿಯಲ್ಲಿ ನಗರದಲ್ಲಿ ಫ್ಲೆಕ್ಸ್ ರಾಜಕೀಯಕ್ಕೆ ಮುಗ್ಧಜೀವ ಬಲಿಯಾಗಿದ್ದು ಮತ್ತೊಂದು ಕಡೆ ಪ್ಲೆಕ್ಸ್ ತೆರವು ಮಾಡಿದಕ್ಕಾಗಿ ಮಹಿಳಾ ಅಧಿಕಾರಿಯ ಬಗ್ಗೆ ಅಗೌರವದಿಂದ ನಿಂದನೆಯ ಮಾತುಗಳನ್ನಾಡಿ ದೂರು ದಾಖಲಾಗಿರುವ ಘಟನೆ ಮಾಸುವ ಮುನ್ನ ಶಾಸಕ ಡಿ. ರವಿಶಂಕರ್ ಅವರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಇಂತಹ ಪ್ರಕರಣಗಳು ಮರುಕಳಿಸದಿರಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಯವಾಗಿದೆ.
ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದ್ದ ಭತ್ತದ ಕಣಜದಲ್ಲಿ ಈಗ ಜಾತಿ ರಾಜಕೀಯದ ರಾಡಿ ಹರಡುತ್ತಿರುವುದು ನಾಗರೀಕರ ಆತಂಕಕ್ಕೆ ಕಾರಣವಾಗಿದ್ದು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡು ಅಗತ್ಯ ಜಾಗೃತೆ ವಹಿಸಿ ಹಾದಿ ಬೀದಿಯಲ್ಲಿ ಅನುಮತಿ ಪಡೆಯದೆ ಪ್ಲೆಕ್ಸ್ ಹಾಕುವುದನ್ನು ತಡೆಯಬೇಕಾಗಿದೆ.



