ಮೈಸೂರು : ಜೆಡಿಎಸ್ ಪಾಳಯದಲ್ಲಿ ಕ್ಷಿಪ್ರ ಕ್ರಾಂತಿ ನಡೆದಿದೆ. ಹಾಲಿ ಶಾಸಕ ಜಿ.ಟಿ ದೇವೇಗೌಡ ಅವರು ಪ್ರತಿನಿಧಿಸುವ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾಜಿ ಸಚಿವ ಸಾ.ರಾ ಮಹೇಶ್ ಕಣಕ್ಕಿಳಿಸಲು ತಯಾರಿ ನಡೆದಿದ್ದು ಇವತ್ತು ಬೆಂಗಳೂರಿನ ನಿವಾಸದಲ್ಲಿ ದೇವೇಗೌಡರು ಸಭೆ ನಡೆಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರನ್ನ ಸಭೆಗೆ ಆಹ್ವಾನಿಸಲಾಗಿತ್ತು. ಸಭೆ ಬಳಿಕ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾರಾ ಮಹೇಶ್, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಲ್ಲಿರುವ ಶಾಸಕರು ನಮ್ಮ ಜೊತೆ ಸಕ್ರಿಯವಾಗಿಲ್ಲ. ನನಗೆ ಕೆ.ಆರ್ ನಗರ ಜನರು ಮೂರು ಬಾರಿ ಆಯ್ಕೆ ಮಾಡಿ ಮಂತ್ರಿ ಮಾಡಿದ್ದಾರೆ. ಯಾವಾಗ ಯಾರು ಸ್ಪರ್ಧೆ ಮಾಡಬೇಕು ಅನ್ನೋದನ್ನ ಕುಮಾರಸ್ವಾಮಿ, ದೇವೇಗೌಡರು ನಿರ್ಧಾರ ಮಾಡ್ತಾರೆ. ಒಂದು ಪಕ್ಷ ಅಂದ ಮೇಲೆ ಅವರ ಕಾರ್ಯಕರ್ತರು ಸಹಜವಾಗಿ ಚರ್ಚೆ ಮಾಡ್ತಾರೆ ಎಂದಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಶಾಸಕರು ಸಕ್ರಿಯವಾಗಿ ಇಲ್ಲದ ಕಾರಣ ಜನರು, ಕಾರ್ಯಕರ್ತರು ಈ ರೀತಿ ಹೇಳ್ತಿರ್ತಾರೆ. ನಮಗೆ ಎಲ್ಲಿ ಸ್ಪರ್ಧೆ ಮಾಡು ಅಂದರೆ ಅಲ್ಲಿ ಮಾಡ್ತೇನೆ. ಎರಡೂ ಪಕ್ಷಗಳು ಯಾವ ತೀರ್ಮಾನ ತಗೋತಾರೆ ನೋಡಬೇಕು ಅಂದಿದ್ದಾರೆ.



