ನವದೆಹಲಿ : ಯಾವುದೇ ಚುನಾವಣೆಯಿಲ್ಲದೆ ನಿತಿನ್ ನಬಿನ್ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದ ನಿರ್ಣಯದಲ್ಲಿ ಆಯ್ಕೆ ಮಾಡಲಾಗಿದೆ. ನಿತಿನ್ ಅವರ ಪರವಾಗಿ 37 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ, ಈ ಸ್ಥಾನಕ್ಕೆ ಬೇರೆ ಯಾವುದೇ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪಿಸಲಾಗಿಲ್ಲ. ಹೀಗಾಗಿ, ನಿತಿನ್ ನಬಿನ್ ಅವಿರೋಧವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಬಿಜೆಪಿಗೆ ನೂತನ ರಾಷ್ಟ್ರಾಧ್ಯಕ್ಷರ ಆಯ್ಕೆಯಾಗಿದೆ.
ಬಿಹಾರದ ಬಿಜೆಪಿ ಹಿರಿಯ ನಾಯಕ ನಿತಿನ್ ನಬಿನ್, ಬಿಹಾರದ ರಾಜಕೀಯದಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಪಾಟ್ನಾದಲ್ಲಿ ಜನಿಸಿದ ಅವರು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಮಗ. ತಮ್ಮ ತಂದೆಯ ಅಕಾಲಿಕ ಮರಣದ ನಂತರ ನಿತಿನ್ ನಬಿನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಆರ್ಎಸ್ಎಸ್ ಹಿನ್ನೆಲೆಯೂ ಇರುವ ಅವರು ಕ್ರಮೇಣ ಪಕ್ಷದೊಳಗೆ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡರು.
ಕೇಂದ್ರ ಸಚಿವ ಜೆ.ಪಿ ನಡ್ಡಾ, ಹಿರಿಯ ನಾಯಕರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರೊಂದಿಗೆ ಇಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು. ಈ ಮೂಲಕ ಅವರು ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.



