ಮೈಸೂರು: ರಾಜ್ಯದಲ್ಲಿ ಮುಂಬರಲಿರುವ ವಿಧಾನ ಸಭೆ ಚುನಾವಣೆಯಲ್ಲಿ JDS ನಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾ.ರಾ.ಮಹೇಶ್ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು. ಆ ಮೂಲಕ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಹಾಲಿ ಶಾಸಕ ಜಿ.ಟಿ.ದೇವೇಗೌಡರಿಗೆ ಶಾಕ್ ಕೊಡಲು ದಳಪತಿಗಳು ಮುಂದಾದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದ್ದು, ಇದೇ ವಿಚಾರಕ್ಕೆ ಸ್ವತಃ ಜಿಟಿಡಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದ್ದು, ನಮ್ಮ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ. ಚುನಾವಣೆ ಬಂದಾಗ ಬೇರೆ ವಿಚಾರದ ಬಗ್ಗೆ ಚರ್ಚೆ ಮಾಡೋಣ. ಈಗ ಜೆಡಿಎಸ್‌ನಲ್ಲಿ ಇದ್ದೇನೆ, ಜೆಡಿಎಸ್ನಿಂದ ಒಂದು ಹೆಜ್ಜೆ ತೆಗೆದಿಲ್ಲ. ಕೆಲ ವಿಚಾರದಲ್ಲಿ ನೋವಾಗಿದೆ, ಅದು ನಾಯಕರಿಗೂ ಗೊತ್ತಿದೆ. ಹಾಗಂತ ನನಗೆ ನೋವಾಗಿದೆ ಅಂತಾ ಪಕ್ಷದಿಂದ ಹೊರ ಹೋಗಿಲ್ಲ ಎಂದಿದ್ದಾರೆ.
ಮುಂದುವರೆದು ಜೆಡಿಎಸ್ ವಿರುದ್ಧವಾಗಿ ನಾನು ಯಾವತ್ತೂ ಮಾತನಾಡಿಲ್ಲ. ಒಳ್ಳೆಯ ಟೈಮ್ ಬರುತ್ತದೆ, ಎಲ್ಲವೂ ಒಳ್ಳೆಯದಾಗುತ್ತೆ. ಕಾಲ ಕಳೆದಂತೆ ಎಲ್ಲಾ ಮುನಿಸು ನೋವು ಮಾಯವಾಗುತ್ತೆ. ನಾನೀಗ ಜೆಡಿಎಸ್‌ನಲ್ಲಿ ಇದ್ದೇನೆ, ಮುಂದಿನ ಚುನಾವಣೆಯಲ್ಲೂ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾಜಿ ಸಚಿವ ಸಾ.ರಾ.ಮಹೇಶ್ ಸ್ಪರ್ಧಿಸಬೇಕೆಂದು ಪಕ್ಷದ ಕಾರ್ಯಕರ್ತರ ಒತ್ತಾಯ ಬೆನ್ನಲ್ಲೇ ಜಿ.ಟಿ.ದೇವೇಗೌಡ ಈ ಸ್ಪಷ್ಟನೆ ನೀಡಿದ್ದಾರೆ.
ಹಲವು ವರ್ಷಗಳ ಕಾಲ ಪಕ್ಷ ಕಟ್ಟಿ ಸಂಘಟನೆ ಮಾಡಿದ್ದೇನೆ. ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಜತೆಯಲ್ಲಿ ಸಾಗಿ ಬಂದಿದ್ದೇನೆ. ಪಕ್ಷದೊಳಗಿನ ಕೆಲ ವಿಷಯಗಳ ಬಗ್ಗೆ ನನಗೆ ಬೇಸರ, ನೋವು ಇರುವುದು ನಿಜ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಎಂದು ಹೇಳಿದ್ದಾರೆ.
ಇನ್ನೂ ಜೆಡಿಎಸ್‌ನಲ್ಲಿ ಅನೇಕ ಜವಾಬ್ದಾರಿ ನಿಭಾಯಿಸಿದ್ದೇನೆ. ದೇವೇಗೌಡರ ಆಶೀರ್ವಾದದಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ಇದ್ದು ಅನುದಾನ ತಂದಿದ್ದೆ. ಈಗ ಸಿದ್ದರಾಮಯ್ಯ ಅವರೊಂದಿಗೆ ಇದ್ದೇನೆ. ಅವರು ಅನುದಾನ ಕೊಟ್ಟಿಲ್ಲ. ಚುನಾವಣೆಗೆ ಇನ್ನು 2.4 ವರ್ಷವಿದೆ. ಕ್ಷೇತ್ರ ಪುನರ್ ವಿಂಗಡಣೆಯಾದರೆ 3 ವರ್ಷ ಆಗಲಿದೆ. ನೋಡೋಣ ಆಗಿನ ಕಾಲಕ್ಕೆ ಏನಾಗುತ್ತೋ ಎಂದು ತಿಳಿಸಿದ್ದಾರೆ.



