ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿದ್ದು, ಸದ್ಯ ತಮಿಳುನಾಡಿನ ಗರ್ವನರ್ ಆರ್.ಎನ್.ರವಿ ಮಂಗಳವಾರ(ಜ.20) ವಿಧಾನಸಭೆಯಲ್ಲಿ ರಾಷ್ಟ್ರಗೀತೆಗೆ ಗೌರವ ನೀಡಿಲ್ಲ ಹಾಗೂ ಕಲಾಪದ ಸಮಯದಲ್ಲಿ ತಮ್ಮ ಮೈಕ್ರೊಫೋನ್ ಸ್ವಿಚ್ ಆಫ್ ಮಾಡಲಾಗಿದೆ ಎಂಬ ಎಂಬ ಕಾರಣಕ್ಕೆ ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ಹೊರನಡೆದ ಘಟನೆ ನಡೆದಿದ್ದು, ಭಾರಿ ಚರ್ಚೆಗೆ ಗೀಡಾಗಿದೆ.
ವಿಧಾನ ಸಭೆಯ ಕಲಾಪದಿಂದ ಹೀಗೆ ಏಕಾಏಕಿ ಹೊಡನಡೆದ ರಾಜ್ಯಪಾಲರ ಈ ನಡೆ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದ್ದು, ಸ್ಪೀಕರ್ ಎಂ.ಅಪ್ಪಾವು ಅವರು ರಾಜ್ಯಪಾಲರಿಗೆ ಸದನದ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
ಇದಾದ ಬಳಿಕ ರಾಜ್‌ಭವನದಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಯಲ್ಲಿ ರಾಜ್ಯಪಾಲರ ಮೈಕ್ ಅನ್ನು ಪದೇ ಪದೇ ಆಫ್ ಮಾಡಲಾಗುತ್ತಿತ್ತು ಮತ್ತು ಅವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿರಲಿಲ್ಲ. ಅಲ್ಲದೆ, ಸ್ಟಾಲಿನ್ ಸರ್ಕಾರದ ಸಾಧನೆಗಳ ಬಗ್ಗೆ ಹಲವಾರು ಆಧಾರರಹಿತ ಹೇಳಿಕೆಗಳನ್ನು ಭಾಷಣದಲ್ಲಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಮುಂದುವರೆದು, ದಲಿತರ ಮೇಲಿನ ದೌರ್ಜನ್ಯ ಮತ್ತು ದಲಿತ ಮಹಿಳೆಯರ ಮೇಲಿನ ಲೈಂಗಿಕ ಹಿಂಸಾಚಾರದಂತಹ ಪ್ರಮುಖ ವಿಷಯಗಳನ್ನು ಭಾಷಣದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಹಾಗೂ ರಾಷ್ಟ್ರಗೀತೆಯನ್ನು ಮತ್ತೆ ಅವಮಾನಿಸಲಾಗಿದ್ದು, ಮೂಲಭೂತ ಸಂವಿಧಾನಿಕ ಕರ್ತವ್ಯವನ್ನು ನಿರ್ಲಕ್ಷಿಸಲಾಗಿದೆ. ಹೀಗೆ ಸುಮಾರು 13 ಅಂಶಗಳ ಆರೋಪಗಳನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರು, ತಮಿಳುನಾಡಿನಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ, ಪಕ್ಷದ ನಾಯಕರೊಂದಿಗೆ ವಿಧಾನಸಭೆಯ ಪ್ರವೇಶದ್ವಾರದಲ್ಲಿ ಘೋಷಣೆಗಳನ್ನು ಕೂಗಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಪಕ್ಷದ ಸಂಸ್ಥಾಪಕ ಸಿ.ಎನ್.ಅಣ್ಣಾದೊರೈಯವರ ಮೇಕೆಗೆ ಗಡ್ಡ ಏಕೆ ಬೇಕು… ಮತ್ತು ರಾಜ್ಯಕ್ಕೆ ರಾಜ್ಯಪಾಲರು ಏಕೆ ಬೇಕು? ಎಂಬ ಹೇಳಿಕೆಯನ್ನು ಉಲ್ಲೇಖಿಸಿ, ರಾಜ್ಯಪಾಲರ ಈ ನಡೆ ಸದನದ 100 ವರ್ಷಗಳಷ್ಟು ಹಳೆಯ ಸಂಪ್ರದಾಯಕ್ಕೆ ಅಗೌರವ ತೋರಿಸಿದೆ ಮತ್ತು ಅವಮಾನಿಸಿದೆ ಎಂದು ಟೀಕಿಸಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಇಂತಹ ಘಟನೆ ಇದೇ ಮೊದಲೇನಲ್ಲ. ಕಳೆದ ವರ್ಷವೂ ಇದೇ ರೀತಿಯ ಘಟನೆ ತಮಿಳುನಾಡು ರಾಜ್ಯಪಾಲರಾಗಿರುವ ರವಿಯವರು ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ, ತೀವ್ರ ಅಸಮಾಧಾನದಿಂದ ಸದನದಿಂದ ಹೊರನಡೆದಿದ್ದರು. ಆ ಸಮಯದಲ್ಲಿ ಇದು ಹೆಚ್ಚಿನ ಮಹತ್ವ ಪಡೆದುಕೊಂಡಿರಲಿಲ್ಲ.
ಆದರೆ, ಈ ಬಾರಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈ ಅಧಿವೇಶನ ರಾಜಕೀಯವಾಗಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದ್ದು, ರಾಜ್ಯಪಾಲರ ಈ ನಡೆ ವಿಪಕ್ಷಗಳಾಗಿರುವ ಎಐಎಡಿಎಂಕೆ ಮತ್ತು ಬಿಜಪಿ ಸರ್ಕಾರದ ವಿರುದ್ದ ಬೊಟ್ಟು ತೋರಲು ಅವಕಾಶ ಮಾಡಿಕೊಟ್ಟಿದೆ. ಸದ್ಯ ತಮಿಳುನಾಡು ರಾಜಕೀಯದಲ್ಲಿ ರಾಜ್ಯಪಾಲರ ಈ ಅಸಮಾಧಾನ ಸಂಚಲನ ಮೂಡಿಸಿದ್ದು, ಚುನಾವಣೆಯ ಮೇಲೆ ಸಾಕಷ್ಟು ಪರಿಣಾಮ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.



