ಹಾಸನ : ಸಕಲೇಶಪುರ – ಆಲೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ನಡುವಿನ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಗೀಡಾಗಿದ್ದು, ಪರಸ್ಪರ ವಿರುದ್ಧದ ದೂರು ಹೈಕಮಾಂಡ್ ಅಂಗಳ ತಲುಪಿವೆ. ಸಕಲೇಶಪುರ-ಆಲೂರು ಮೀಸಲು ಕ್ಷೇತ್ರ ವಿಸ್ತಾರದಲ್ಲಿ ದೊಡ್ಡದು. ಬೆಟ್ಟ-ಗುಡ್ಡಗಳ ನಡುವೆ ಗ್ರಾಮ, ಕುಗ್ರಾಮಗಳನ್ನು ಹೊಂದಿದ್ದು, ಸಮಸ್ಯೆಗಳು ಬೃಹದ್ದಾಕಾರವಾಗಿದೆ. ಇಂತಹ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಬೇಕಾದ ಕಾಂಗ್ರೆಸ್‌ನ ಹಲವು ಮುಖಂಡರು ನಾ ಮುಂದು ತಾ ಮುಂದು ಎಂದು ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಇದು ವೈಮನಸ್ಸಿಗೆ ಕಾರಣವಾಗಿದೆ.
ಕಾಂಗ್ರೆಸ್ ಮುಖಂಡರ ನಡುವಿನ ಗೊಂದಲ ತಾರಕಕ್ಕೇರಿದ್ದು, ಅದರಲ್ಲೂ ಪಕ್ಷದ ಪರಾಜಿತ ಅಭ್ಯರ್ಥಿ ಮುರಳಿಮೋಹನ್ ಅವರ ವರ್ತನೆ ಬಹುತೇಕ ಸ್ಥಳೀಯ ಪ್ರಮುಖರ ಬೇಸರಕ್ಕೆ ಕಾರಣವಾಗಿದೆ. ಮುರಳಿಮೋಹನ್ ಸ್ಥಳೀಯರಲ್ಲ. ಹೀಗಿದ್ದರೂ ಪಕ್ಷ ಅವರಿಗೆ ಕಳೆದ ಬಾರಿ ಟಿಕೆಟ್ ನೀಡಿತ್ತು. ಪಕ್ಷದ ಹಿರಿಯರು-ಕಿರಿಯರನ್ನು ಪ್ರೀತಿ, ವಿಶ್ವಾಸದಿಂದ ತೆಗೆದುಕೊಂಡು ಹೋಗುವ ಬದಲು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಪಕ್ಷದ ಸಣ್ಣಸ್ವಾಮಿ ಕೂಡ ಪರಾಜಿತ ಅಭ್ಯರ್ಥಿ. ಅವರನ್ನು ಸಚಿವರ ಸಭೆಗೆ ಬಾರದಂತೆ ತಳ್ಳಿದ್ದರು. ಪೊಲೀಸರನ್ನು ಬಿಟ್ಟು ಹೊರದಬ್ಬಿಸಿದ್ದಾರೆ ಎಂಬ ವಿಷಯ ಈಗ ವಾಗ್ವಾದ, ಆಕ್ರೋಶಕ್ಕೆ ಕಾರಣವಾಗಿದೆ.
2023 ರ ಚುನಾವಣೆಯಲ್ಲಿ ಪರಾಭವಗೊಂಡಿರುವ ಮುರಳಿಮೋಹನ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಇಂದಿಗೂ ಹೋರಾಟ ನಡೆಸುತ್ತಲೇ ಇದ್ದಾರೆ. ಪಕ್ಷ ಅಧಿಕಾರದಲ್ಲಿಇರುವ ಕಾರಣ ತಮ್ಮ ನಿಷ್ಠ ಅಧಿಕಾರಿಗಳ ರಕ್ಷಣೆ, ಕೆಲವರ ಎತ್ತಂಗಡಿ ಮಾಡಿಸುವಲ್ಲಿಯೂ ಇವರ ಹೆಸರು ತಳಕು ಹಾಕಿಕೊಂಡಿದ್ದು, ಗ್ಯಾರಂಟಿ ಸಮಿತಿ ಅಧ್ಯಕ್ಷರು ಆಗಿರುವ ಕಾರಣ ಮುಂಚೂಣಿಯಲ್ಲಿಇದ್ದಾರೆ.
ಇನ್ನೂ ಪಕ್ಷದ ಕೆಲ ಮುಖಂಡರೊಂದಿಗೆ ಮುನಸಿಕೊಂಡಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಸಕಲೇಶಪುರ ಕ್ಷೇತ್ರದಲ್ಲಿ ಸ್ಥಳೀಯರ ಬದಲು ಹೊರಗಿನವರೇ ಬಂದು ಚುನಾವಣೆಯಲ್ಲಿ ಗೆದ್ದು ಅಧಿಕಾರ ನಡೆಸಿದವರೇ ಹೆಚ್ಚು. ಬೇಲೂರು ಶಾಸಕರಾಗಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಡಿ.ಮಲ್ಲೇಶ್ ಕೂಡ ಈ ಕ್ಷೇತ್ರದಲ್ಲಿಅದೃಷ್ಟ ಪರೀಕ್ಷೆ ಮಾಡಿ ಸೋಲು ಕಂಡಿದ್ದರು. ಸಣ್ಣಸ್ವಾಮಿ, ಸಿದ್ದಯ್ಯ, ಮುರಳಿ ಮೋಹನ್ ಕೂಡ ಸೋಲಿನ ರುಚಿ ಕಂಡಿದ್ದಾರೆ.
ಈ ಪರಿಣಾಮ ತಮ್ಮ ಪಕ್ಷದವರೇ ತಮ್ಮ ಗೆಲುವಿಗೆ ಮುಳುವಾದರು ಎಂಬ ಅಸಮಾಧಾನವಿದ್ದು, ಒಟ್ಟಾರೆ ಸಕಲೇಶಪುರ-ಆಲೂರು ಕ್ಷೇತ್ರ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಇರುವಾಗಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ತಾರಕ್ಕಕ್ಕೇರಿರುವುದು ಉತ್ತಮ ಬೆಳವಣಿಗೆಯಲ್ಲ ಎಂಬುದು ನಿಷ್ಠಾವಂತರ ಅಭಿಪ್ರಾಯವಾಗಿದೆ.
ಸಕಲೇಶಪುರದಲ್ಲಿ ಜ.16 ರಂದು ಜಿಲ್ಲಾಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ನಡೆಸಿದ ಜನಸ್ಪಂದನ ಸಭೆಯ ಬಳಿಕ ವಿಧಾನಸೌಧ ಆವರಣದ ಬಳಿ ಮುಖಂಡ ಸಣ್ಣಸ್ವಾಮಿ ಸಚಿವರನ್ನು ಭೇಟಿ ಮಾಡಲು ಬರುತ್ತಿದ್ದಾಗ ಮುರಳಿಮೋಹನ್ ಅವರನ್ನು ತಳ್ಳಿ ಅವಮಾನಿಸಿದ್ದು, ಜತೆಗೆ ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾನುಬಾಳ್ಳು ಭಾಸ್ಕರ್, ಯಡೇಹಳ್ಳಿ ಮಂಜು ಮತ್ತಿತರ ತಂಡ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ದೂರು ನೀಡಲು ಮುಂದಾಗಿದೆ. ಈ ಮಧ್ಯೆ ಮುರಳಿ ಮೋಹನ್, ‘ಧಿ‘ರಾಜ್ಯ ನಾಯಕರನ್ನೇ ಕ್ಷೇತ್ರಕ್ಕೆ ಕರೆಸಿ ಸಭೆ ಮಾಡುತ್ತೇನೆ ಎಂದಿದ್ದಾರೆ.
ಪಕ್ಷದಲ್ಲಿ ಕೆಲವರು ಗೊಂದಲ ಸೃಷ್ಟಿಸಿ, ಗುಂಪುಗಾರಿಕೆ ಮಾಡುತ್ತ ತನ್ನನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಅದೆಲ್ಲವಿಫಲಯತ್ನ ಎಂದು ತಿಳಿಯಬೇಕು. ನನ್ನ ನಾಯಕತ್ವದಲ್ಲಿ ಪಕ್ಷ ಸಂಘಟಿಸಿದ್ದೇನೆ.
- ಮುರಳಿ ಮೋಹನ್ ವಿಧಾನಸಭೆ ಪರಾಜಿತ ಅಭ್ಯರ್ಥಿ. ಸಕಲೇಶಪುರ
ಮಲೆನಾಡು ಜನ ಶಾಂತಿಪ್ರಿಯರು. ನಾವು ಯಾವ ಗಲಭೆ ಬಯಸುವವರಲ್ಲ. ಸಣ್ಣಸ್ವಾಮಿ, ಸಿದ್ದಯ್ಯ, ಮಲ್ಲೇಶ್ ಕೂಡ ಪರಾಜಿತ ಅಭ್ಯರ್ಥಿಗಳು. ಅವರದ್ದೇ ಆದ ಗೌರವ ಇರುತ್ತದೆ. ಜನಸ್ಪಂದನಾ ಸಭೆ ದಿನ ನಡೆದ ಘಟನಾವಳಿ ಮನಸ್ಸಿಗೆ ಬೇಸರ ತರಿಸಿದ್ದು,ಹೈಕಮಾಂಡ್‌ಗೆ ವಿಷಯ ತಲುಪಿದೆ.
- ಹಾನುಬಾಳ್ಳು ಭಾಸ್ಕರ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಸಕಲೇಶಪುರ



