ಬಳ್ಳಾರಿ : ಬ್ಯಾನರ್ ಗಲಭೆ ಖಂಡಿಸಿ ಜನವರಿ 17 ರಂದು ನಡೆದ ಬೃಹತ್ ಸಮಾವೇಶದಲ್ಲಿ ಪೋಕ್ಸೋ ಪ್ರಕರಣದ ಸಂತ್ರಸ್ತೆಯ ಹೆಸರು ಸೇರಿದಂತೆ ಸಂಪೂರ್ಣ ವಿವರ ಬಹಿರಂಗಪಡಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಇಂದು ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು ಗಲಭೆ ಖಂಡಿಸಿ ನಡದ ಸಮಾವೇಶದಲ್ಲಿ ಸಾಕಷ್ಟು ವಿಚಾರಗಳನ್ನ ನಮ್ಮ ನಾಯಕರು ಮಾತನಾಡಿದ್ದಾರೆ. ನಾನೂ ಮಾತನಾಡಿದ್ದೇನೆ. ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ದಾಂಧಲೆ ನಡೆಯುತ್ತಿದೆ ಎಂದು ದೂರಿದರು.
ಕೊಲೆಗಳು, ಗಾಂಜಾ, ಡ್ರಗ್ಸ್, ಅತ್ಯಾಚಾರ ನಡೆಯುತ್ತಿದೆ. ಅದನ್ನೇ ಪ್ರಸ್ತಾಪ ಮಾಡುವಾಗ ಅತ್ಯಾಚಾರದ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇನೆ. ಬಾಲಕಿಯ ಹೆಸರು ಹೇಳಿ ಉಲ್ಲೇಖ ಮಾಡಿದ್ದೆ. ಆ ಬಾಲಕಿಯ ಕುಟುಂಬಕ್ಕೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಆ ಸಂತ್ರಸ್ತ ಕುಟುಂಬದ ಜೊತೆ ನಾನು ಇರುತ್ತೇನೆ. ಆ ಕುಟುಂಬದ ಜೊತೆ ಬಿಜೆಪಿಯೂ ಇರುತ್ತೆ. ಅವರಿಗೆ ನ್ಯಾಯ ಒದಗಿಸುತ್ತೇವೆ. ಆ ಕುಟುಂಬ, ಆ ಮಗಳಿಗೆ ನೋವಾಗಿದರೆ ನಾನು ಕ್ಷಮೆ ಕೇಳುತ್ತೇನೆ. ಜಾಗೃತಿ ಮಾಡಿಸುವ ಸಲುವಾಗಿ ನನ್ನ ಮಗಳು ಅಂದುಕೊಂಡು ಪ್ರಸ್ತಾಪ ಮಾಡಿದ್ದೇನೆ ಎಂದ ರಾಮುಲು, ರಾಮಾಯಣದ ಕಥೆ ಉಲ್ಲೇಖಿಸಿ ತನ್ನ ಹೇಳಿಕೆ ಸಮರ್ಥಿಸಿಕೊಂಡರು.
ನಾನು ಎಲ್ಲವನ್ನೂ ಶಾಸಕರ ಮೇಲೆ ಹೇಳಿ ಆರೋಪ ಮಾಡುವುದಿಲ್ಲ. ಆದರೆ ಯಾರದ್ದೋ ಬೆಂಬಲ ಇರುವುದರಿಂದ ಎಲ್ಲವೂ ನಡೆಯುತ್ತಿವೆ. ಅನೈತಿಕ ಚಟುವಟಿಕೆಗಳು ಎಲ್ಲೆಂದರಲ್ಲಿ ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.



