Thursday, January 22, 2026
Google search engine

Homeರಾಜಕೀಯರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು : ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌

ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು : ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌

ಬೆಂಗಳೂರು : ರಾಜ್ಯಪಾಲರಿಗೆ ಅಗೌರವ ತೋರಿದ ವಿಧಾನಸಭೆ ಮತ್ತು ವಿಧಾನಪರಿಷತ್‌ನ ಸದಸ್ಯರುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದಿದ್ದಾರೆ.

ವಿಧಾನಸಭೆ ಸಭಾಂಗಣದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮುಗಿಸಿ ನಿರ್ಗಮಿಸುವ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ವಿಧಾನಸಭೆ ಹಾಗೂ ವಿಧಾನಪರಿಷತ್‌ನ ಸದಸ್ಯರುಗಳು ಅವರನ್ನು ಅಡ್ಡಗಟ್ಟಿ ತಳ್ಳಾಡಿ, ನೂಕುನುಗ್ಗಲು ಉಂಟುಮಾಡಿ ರಾಜ್ಯಪಾಲರಿಗೆ ಅಗೌರವ ತೋರಿದ್ದಾರೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ಅಲ್ಲದೆ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 27 ರಂತೆ ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮ ; ಸಂವಿಧಾನದ 175 ಅಥವಾ 176ನೇ ಅನುಚ್ಛೇದದ ಮೇರೆಗೆ ವಿಧಾನಮಂಡಲದ ಉಭಯ ಸದನಗಳು ಸಭೆ ಸೇರುವಾಗ ಅಥವಾ 175 ನೇ ಅನುಚ್ಛೇದದ ಮೇರೆಗೆ ವಿಧಾನಸಭಾ ಸದಸ್ಯರು ಮಾತ್ರ ಸೇರುವಾಗ ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಯಾರೇ ಸದಸ್ಯರು ಯಾವುದೇ ಭಾಷಣ ಮಾಡುವ ಮೂಲಕ ಅಥವಾ ಯಾವುದೇ ಕ್ರಿಯಾಲೋಪವೆತ್ತಿ ರಾಜ್ಯಪಾಲರ ಭಾಷಣಕ್ಕೆ ಮುಂಚೆ ಆಗಲಿ ಅಥವಾ ತರುವಾಯವಾಗಲೀ ಅಡ್ಡಿಯನ್ನುಂಟು ಮಾಡತಕ್ಕದ್ದಲ್ಲ. ಅಥವಾ ವಿಘ್ನವನ್ನುಂಟು ಮಾಡತಕ್ಕದ್ದಲ್ಲ ಮತ್ತು ಅಂತಹ ವಿಘ್ನವನ್ನು ಸದನದ ಆದೇಶದ ತೀವ್ರ ಉಲ್ಲಂಘನೆ ಎಂದು ಪರಿಗಣಿಸಿ ವಿಧಾನಸಭೆಯ ಮುಂದಿನ ಉಪವೇಶನದಲ್ಲಿ ವಿಧಾನಸಭಾಧ್ಯಕ್ಷರು ಆ ಬಗ್ಗೆ ಹಾಗೆ ವ್ಯವಹರಿಸತಕ್ಕದ್ದು ಎಂಬ ಉಲ್ಲೇಖವಿದೆ ಎಂದಿದ್ದಾರೆ.

ಈ ನಿಯಮದ ಅನ್ವಯ ರಾಜ್ಯಪಾಲರು ನಿರ್ಗಮಿಸುವ ಸಂದರ್ಭದಲ್ಲಿ ಅಗೌರವ ತೋರಿದ ಉಭಯ ಸದನಗಳ ಸದಸ್ಯರುಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಅಶೋಕ್‌ ಸಭಾಧ್ಯಕ್ಷರನ್ನು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular