ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ವ್ಯಕ್ತಿಗಳನ್ನು ಓಡಿ ಹಿಡಿದುಕೊಂಡು ಬಂದು ಹಿಗ್ಗಾ-ಮುಗ್ಗ ಥಳಿಸಿ ಬಳಿಕ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಇದೆ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದವರು ನೀಡಿದ ದೂರಿನಂತೆ ಸ್ಥಳೀಯರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ದಿನಾಂಕ 20-01-2026 ರಂದು ಬೆಳಗ್ಗಿನ ಜಾವ 02.10 ರಿಂದ 02.30 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಪಿರ್ಯಾದಿದಾರರಾದ ದೇವಿಪ್ರಸಾದ್ ಎಂಬವರ ಮನೆ ಬಳಿ ಆರೋಪಿತರಾದ ಮೊಯ್ದೀನ್ ನಾಸೀರ್ ಮತ್ತು ಅಬ್ದುಲ್ ಸಮದ್ ಎಂಬವರು ಪಿರ್ಯಾದಿದಾರರ ಬೈಕ್ ಕಳವು ಮಾಡಿಕೊಂಡು ಹೋಗಲು ಯತ್ನಿಸುತ್ತಿದ್ದು, ತಡೆಯುವ ವೇಳೆ ಹಲ್ಲೆ ನಡೆಸಿ ಬೈಕ್‌ನೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ದೂರುದಾರರು ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 02/2026ಕಲಂ: Us 303(2), 307 BNS -2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಮೇಲಿನ ಘಟನೆಗೆ ಸಂಬಂಧಿಸಿದಂತೆ ರಸ್ತೆಬದಿಯಲ್ಲಿದ್ದ ಬೈಕ್ ತೆಗೆದುಕೊಂಡು ಹೋಗುವ ಸಮಯ ಸುಮಾರು 25–30 ಜನರ ಅಕ್ರಮ ಕೂಟ ಸೇರಿ ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತನನ್ನು ಸುತ್ತುವರಿದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಮರದ ಕೋಲಿನಿಂದ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರಾದ ಅಬ್ದುಲ್ ಸಮದ್ ಬೇಂಗ್ರೆ ಕುಳೂರು ಮಂಗಳೂರು ಎಂಬವರು ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 03/2026ಕಲಂ: ಕಲಂ 189(2), 191(2), 191(3), 352, 115(2), 118(1), 351(2) ಜೊತೆಗೆ 190 ಬಿ.ಎನ್.ಎಸ್-2023 ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಂದಿಸಿದಂತೆ ಮೇಲಿನ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



